`ನಾನು ರಾಜಕೀಯ ಬಲಿಪಶು ಇರಬಹುದು; ಆದರೆ ನನ್ನ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡಿಲ್ಲ- ವಾದ್ರಾ
ನವದೆಹಲಿ : "ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸೋದರಳಿಯ ರಾಬರ್ಟ್ ವಾದ್ರಾ ಅವರಂತೆ ನಾನೂ ಕೂಡ ರಾಜಕೀಯ ಬಲಿಪಶು" ಎಂದು ಹೇಳಿದ್ದ ಮದ್ಯದ ದೊರೆ ವಿಜಯ್ ಮಲ್ಯ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ರಾಬರ್ಟ್ ವಾದ್ರಾ ಬ್ಯಾಂಕ್ಗಳಿಂದ ಪಡೆದ ಸಾಲವನ್ನು ಹಿಂದಿರುಗಿಸಲಾಗದೆ ದೇಶಬಿಟ್ಟು ಹೋದವರೊಂದಿಗೆ ನನ್ನ ಹೆಸರು ಸೇರಿಸುವುದು ಬೇಡ ಎಂದು ಹೇಳಿದ್ದಾರೆ.
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಅವರನ್ನು ಶರಣಾಗುವಂತೆ ಭಾರತ ಮಲ್ಯಗೆ ಮಾಡಿದ ವಿನಂತಿಯನ್ನೂ ವಿರೋಧಿಸಿ ಯುಕೆ ನ್ಯಾಯಾಲಯದಲ್ಲಿ ಹಾಜರಾಗಿದ್ದ ಅವರು, ತಮ್ಮ ನಡೆಯನ್ನು ರಕ್ಷಣಾತ್ಮಕ ದೃಷ್ಟಿಯಿಂದ ಸಮರ್ಥಿಸಿಕೊಳ್ಳುವ ಸಂದರ್ಭದಲ್ಲಿ "ಸೋನಿಯಾ ಅಳಿಯ ವಾದ್ರಾ ಮತ್ತು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರಂತೆ ನಾನು ಕೂಡ ಓರ್ವ ರಾಜಕೀಯ ಬಲಿಪಶು" ಎಂದಿದ್ದರು.
ಈ ಹಿನ್ನೆಲೆಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ವಾದ್ರಾ ಅವರು, "ನಾನು ರಾಜಕೀಯ ಬಲಿಪಶು ಇರಬಹುದುನಾನೆಂದೂ ಯಾವ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿಲ್ಲ ಹಾಗೂ ಬೇರೊಬ್ಬರ ಹಣವನ್ನು ನುಂಗಿ ವಿದೇಶಕ್ಕೆ ಓಡಿಹೋಗಿಲ್ಲ'' ಎಂದಿದ್ದಾರೆ.
ಒಟ್ಟು 9 ಸಾವಿರ ಕೋಟಿ ರೂ. ಮನಿ ಲಾಂಡರಿಂಗ್ ಸೇರಿದಂತೆ ಇತರ ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದಂತೆ ಬಾರತಕ್ಕೆ ಬೇಕಾಗಿರುವ ಆರೋಪಿ ಮಲ್ಯ ಅವರು ಡಿಸೆಂಬರ್ 4 ರಂದು ಯುಕೆ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ.