ನನಗೆ ಬಂಧನದ ಭೀತಿಯಿಲ್ಲ: ಕಮಲ್ ಹಾಸನ್
ಪ್ರತಿಯೊಬ್ಬರೂ ಅವರದೇ ಆದ ಅಭಿಪ್ರಾಯಗಳು, ನಿಲುವನ್ನು ಹೊಂದಿರುತ್ತಾರೆ. ಇದು ಪ್ರಜಾಪ್ರಭುತ್ವ ರಾಷ್ಟ್ರ. ಎಲ್ಲರಿಗೂ ಅವರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಚೆನ್ನೈ: ನಾಥೂರಾಮ್ ಗೋಡ್ಸೆ ಮೊದಲ ಹಿಂದೂ ಭಯೋತ್ಪಾದಕ ಎಂಬ ಹೇಳಿಕೆ ನೀಡಿದ ಬಳಿಕ ಸಾಕಷ್ಟು ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ನನಗೆ ಬಂಧನದ ಭೀತಿಯಿಲ್ಲ ಎಂದು ನಟ, ರಾಜಕಾರಣಿ ಕಮಲ್ ಹಾಸನ್ ಹೇಳಿದ್ದಾರೆ.
ಚೆನ್ನೈ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಬಂಧಿಸಿದರೆ ನನಗೇನೂ ಸಮಸ್ಯೆಯಿಲ್ಲ. ಆದರೆ ಅವರಿಗೇ ಮತ್ತಷ್ಟು ಸಮಸ್ಯೆಗಳು ಎದುರಾಗಲಿವೆ. ಇದು ಎಚ್ಚರಿಕೆಯಲ್ಲ, ಕೇವಲ ಸಲಹೆ ಅಷ್ಟೇ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಗುರುವಾರ ರಾತ್ರಿ ಸೂಳೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂಬಂಧ ಅರವಕುರಿಚ್ಚಿಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಪಾಲ್ಗೊಂಡಿದ್ದ ವೇಳೆ ದುಷ್ಕರ್ಮಿಗಳು ಅವರ ಮೇಲೆ ಮೊಟ್ಟೆ ಎಸೆದಿದ್ದರಲ್ಲದೆ ಕಲ್ಲು ತೂರಾಟ ಸಹ ನಡೆಸಿದ್ದರು. ಈ ಸಂಬಂಧ ಇಂದು ಪ್ರತಿಕ್ರಿಯಿಸಿದ ಕಮಲ್ ಹಾಸನ್, "ಬಹುಶಃ ರಾಜಕೀಯದ ಮಟ್ಟ ಕುಸಿದಿದೆ ಎಂದು ನಾನು ಭಾವಿಸುತ್ತೇನೆ. ನನಗೆ ಯಾವುದೇ ಹೆದರಿಕೆಯಿಲ್ಲ. ಪ್ರತಿ ಧರ್ಮದಲ್ಲೂ ಭಯೋತ್ಪಾದಕರಿದ್ದಾರೆ. ನಾವು ಈ ಬಗ್ಗೆ ಸುಳ್ಳು ವಾದವನ್ನು ಎಂದಿಗೂ ಮಂಡಿಸುವುದಿಲ್ಲ. ಕೇವಲ ಬೂಟಾಟಿಕೆಗೆ ಹೇಳುವುದಿಲ್ಲ. ಪ್ರತಿಯೊಂದು ಧರ್ಮದಲ್ಲೂ ಉಗ್ರರು ಇದ್ದಾರೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ ಎಂದರು.
ಇತರ ನಟರಿಗೆ ಬೆಂಬಲ ನೀಡುವುದಿಲ್ಲ ಎಂಬ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಕಮಲ್, ಪ್ರತಿಯೊಬ್ಬರೂ ಅವರದೇ ಆದ ಅಭಿಪ್ರಾಯಗಳು, ನಿಲುವನ್ನು ಹೊಂದಿರುತ್ತಾರೆ. ಇದು ಪ್ರಜಾಪ್ರಭುತ್ವ ರಾಷ್ಟ್ರ. ಎಲ್ಲರಿಗೂ ಅವರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ ಎಂದು ಹೇಳಿದರು.
ನಾಥೂರಾಮ್ ಗೋಡ್ಸೆ ಬಗ್ಗೆ ಹೇಳಿಕೆಗೆ ಸ್ಪಷ್ಟನೆ ನೀಡುತ್ತಾ, ಅಂದು ನನ್ನ ಭಾಷಣ ಶಾನ್ಸ್ತಿ ಮತ್ತು ಸಹೋದರತ್ವದ ಬಗ್ಗೆ ಕೇಂದ್ರಿತವಾಗಿತ್ತು ಎಂದ ಕಮಲ್ ಹಾಸನ್, ನನಗೆ ಸಾಕಷ್ಟು ರಕ್ಷಣೆ ನೀಡಲಾಗಿದೆ. ಆದರೂ ಏನಾದರೂ ಮಾಡಲೇಬೇಕು ಎಂಬ ದುರುದ್ದೇಶ ಯಾರಿಗಾದರೂ ಇದ್ದರೆ, ಅದನ್ನು ನಾವು ಮಾಡೇ ಮಾಡುತ್ತಾರೆ ಎಂದು ಹೇಳಿದರು.