ರಾಜಸ್ಥಾನ: ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ, ಎಲ್ಲಾ 6 ಬಿಎಸ್ಪಿ ಶಾಸಕರು ಕಾಂಗ್ರೆಸ್ಗೆ!
ಸೋಮವಾರ ತಡರಾತ್ರಿ ರಾಜಸ್ಥಾನದಲ್ಲಿ ನಡೆದ ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ, ಬಿಎಸ್ಪಿಯ ಎಲ್ಲಾ 6 ಶಾಸಕರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಜೈಪುರ: ಸೋಮವಾರ ತಡರಾತ್ರಿ ರಾಜಸ್ಥಾನದಲ್ಲಿ ನಡೆದ ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ, ಬಿಎಸ್ಪಿಯ ಎಲ್ಲಾ 6 ಶಾಸಕರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಇದರಿಂದಾಗಿ ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಸಂಪೂರ್ಣ ಬಹುಮತ ದೊರೆತಂತಾಗಿದೆ.
ಬಿಎಸ್ಪಿ ನಾಯಕ ಜೋಂಗಿದಾರ್ ಅವನಾ ಸೇರಿದಂತೆ ಎಲ್ಲ ಶಾಸಕರು ಬಿಎಸ್ಪಿ ತೊರೆದು ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಂಡಿದ್ದಾರೆ. ಶಾಸಕರು ತಮ್ಮ ವಿಲೀನ ಪತ್ರವನ್ನು ವಿಧಾನಸಭೆಯ ಸ್ಪೀಕರ್ ಡಾ.ಸಿ.ಪಿ ಜೋಶಿ ಅವರಿಗೆ ಸಲ್ಲಿಸಿದರು.
ಎಲ್ಲಾ ಬಿಎಸ್ಪಿ ಶಾಸಕರು ಸಿಎಂ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ತಮ್ಮ ನಿರ್ಧಾರದ ಬಗ್ಗೆ ತಿಳಿಸಿರುವುದಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಜೀ ಮೀಡಿಯಾಕ್ಕೆ ಫೋನ್‌ನಲ್ಲಿ ಮಾಹಿತಿ ನೀಡಿದರು. ರಾಜಸ್ಥಾನದ ಜನರ ಹಿತದೃಷ್ಟಿಯಿಂದ ಬಿಎಸ್ಪಿ ಶಾಸಕರು ಈ ನಿರ್ಧಾರ ಕೈಗೊಂಡಿದ್ದಾರೆ. ಎಲ್ಲಾ ಶಾಸಕರು ಅಭಿವೃದ್ಧಿ ಪರದ ಸರ್ಕಾರಕ್ಕೆ ಸಾಥ್ ನೀಡಿದ್ದಾರೆ ಎಂದು ಅವರು ತಿಳಿಸಿದರು.
ವಾಸ್ತವವಾಗಿ, 2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳು, ಬಿಜೆಪಿ 73 ಮತ್ತು ಬಿಎಸ್ಪಿ 6 ಸ್ಥಾನಗಳನ್ನು ಪಡೆದುಕೊಂಡಿದೆ. ಇದೀಗ ಬಿಎಸ್ಪಿಯ 6 ಶಾಸಕರು ಕಾಂಗ್ರೆಸ್‌ನಲ್ಲಿ ವಿಲೀನಗೊಂಡ ಬಳಿಕ ಗೆಹ್ಲೋಟ್ ಸರ್ಕಾರಕ್ಕೆ ಪೂರ್ಣ ಬಹುಮತ ದೊರೆತಂತಾಗಿದ್ದು, ಸರ್ಕಾರ ಸುಭದ್ರವಾಗಿದೆ ಎಂಬ ಸಂದೇಶ ರವಾನೆಯಾಗಿದೆ.
ಪಂಚಾಯತ್ ಚುನಾವಣೆಗಳ ಮೊದಲು ಕಾಂಗ್ರೆಸ್ ತನ್ನ ಸರ್ಕಾರವನ್ನು ಮತ್ತು ಪಕ್ಷವನ್ನು ಬಲಪಡಿಸಿದೆ. ಈ ಬಾರಿ ಕಾಂಗ್ರೆಸ್ ಸಂಸ್ಥೆ ಮತ್ತು ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸದಸ್ಯತ್ವ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಮತ್ತೊಂದೆಡೆ, ಇದು ಬಿಎಸ್ಪಿಗೆ ದೊಡ್ಡ ಹಿನ್ನಡೆಯಾಗಿದೆ. ಬಿಎಸ್ಪಿ ಶಾಸಕರು ಕಾಂಗ್ರೆಸ್ ಸೇರುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ 2008 ರಲ್ಲಿ ಆರು ಬಿಎಸ್ಪಿ ಶಾಸಕರು ಕಾಂಗ್ರೆಸ್ ಸೇರಿದ್ದರು. ಕಾಕತಾಳೀಯವಾಗಿ ಆಗಲೂ ಸಹ ಅಶೋಕ್ ಗೆಹ್ಲೋಟ್ ಅವರೇ ಮುಖ್ಯಮಂತ್ರಿಯಾಗಿದ್ದರು.