ಭಾರತಕ್ಕೆ ಬಾಂಗ್ಲಾತಂಕ: ಸುದೀರ್ಘ, ಅಸುರಕ್ಷಿತ ಗಡಿಯಾದ್ಯಂತ ಅಕ್ರಮ ನುಸುಳುವಿಕೆಯ ಭೀತಿ
India Bangladesh Border: ಬಾಂಗ್ಲಾದೇಶ ಆಧುನಿಕ ಡ್ರೋನ್‌ಗಳನ್ನು ಬಳಸಲು ಆರಂಭಿಸಿದ್ದು, ಇದು ಭಾರತಕ್ಕೆ ಭದ್ರತಾ ಆತಂಕಗಳನ್ನು ಉಂಟುಮಾಡಿದೆ. ಅದರೊಡನೆ, ಶೇಖ್ ಹಸೀನಾ ನಾಯಕತ್ವದ ಅವಧಿ ಮುಕ್ತಾಯಗೊಂಡಿದ್ದು, ಮುಂದೆ ಏನಾಗಲಿದೆ ಎಂಬ ಅನಿಶ್ಚಿತತೆಗಳು ಈ ಕಳವಳಗಳನ್ನು ಹೆಚ್ಚಿಸಿವೆ.
India Bangladesh Border: ಭಾರತ ಇತರ ದೇಶಗಳೊಡನೆ ಹಂಚಿಕೊಳ್ಳುವ ತನ್ನ ಗಡಿಗಳ ಪೈಕಿ, ಬಾಂಗ್ಲಾದೇಶದ ಜೊತೆಗಿನ ಗಡಿಯೂ ಬಹಳ ಸುದೀರ್ಘವಾದ ಗಡಿಯಾಗಿದೆ. ಆದರೆ, ಬಾಂಗ್ಲಾದೇಶದಲ್ಲಿ ತಲೆದೋರಿರುವ ಉದ್ವಿಗ್ನತೆಯ ಪರಿಣಾಮವಾಗಿ, ಗಡಿಯಾದ್ಯಂತ ವಿವಿಧ ಸಮಸ್ಯೆಗಳು ತಲೆದೋರಲು ಆರಂಭಿಸಿವೆ. ಈ ಗಡಿ 4,000 ಕಿಲೋಮೀಟರ್‌ಗಳಿಗೂ ಹೆಚ್ಚು ದೀರ್ಘವಾಗಿದ್ದು, ಇದು ಅತ್ಯಂತ ಮುಕ್ತ ಮತ್ತು ದಾಟಲು ಸುಲಭವೂ ಆಗಿರುವುದರಿಂದ, ಇದನ್ನು ನಿರ್ವಹಿಸುವುದು ಭಾರತೀಯ ಅಧಿಕಾರಿಗಳಿಗೆ ಮೊದಲಿನಿಂದಲೂ ಬಹಳ ಕಷ್ಟಕರವಾಗಿದೆ.
ಇತ್ತೀಚೆಗೆ, ಬಾಂಗ್ಲಾದೇಶ ಆಧುನಿಕ ಡ್ರೋನ್‌ಗಳನ್ನು ಬಳಸಲು ಆರಂಭಿಸಿದ್ದು, ಇದು ಭಾರತಕ್ಕೆ ಭದ್ರತಾ ಆತಂಕಗಳನ್ನು ಉಂಟುಮಾಡಿದೆ. ಅದರೊಡನೆ, ಶೇಖ್ ಹಸೀನಾ ನಾಯಕತ್ವದ ಅವಧಿ ಮುಕ್ತಾಯಗೊಂಡಿದ್ದು, ಮುಂದೆ ಏನಾಗಲಿದೆ ಎಂಬ ಅನಿಶ್ಚಿತತೆಗಳು ಈ ಕಳವಳಗಳನ್ನು ಹೆಚ್ಚಿಸಿವೆ.
ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ಗಡಿ ನದಿಗಳು, ದಟ್ಟ ಕಾಡುಗಳು, ಮತ್ತು ಅತ್ಯಂತ ದುರ್ಗಮವಾದ ಹಳ್ಳಿಗಳ ಮೂಲಕ ಹಾದುಹೋಗುವುದರಿಂದ, ಅದನ್ನು ನಿರಂತರವಾಗಿ ಕಣ್ಗಾವಲು ನಡೆಸುವುದು ಬಹಳ ಕಷ್ಟಕರವಾಗಿದೆ. ಈ ಗಡಿಯನ್ನು ಭದ್ರಪಡಿಸಲು ಬಹಳಷ್ಟು ವರ್ಷಗಳ ಕಾಲ ನಿರಂತರವಾಗಿ ಪ್ರಯತ್ನ ನಡೆಸಿದ ಹೊರತಾಗಿಯೂ, ಗಡಿಯ ಬಹುದೊಡ್ಡ ಪ್ರದೇಶಗಳಿಗೆ ಇನ್ನೂ ಬೇಲಿ ಅಳವಡಿಸಲಾಗಿಲ್ಲ. ಇದರಿಂದಾಗಿ ಜನರಿಗೆ ಅಕ್ರಮವಾಗಿ ಗಡಿ ದಾಟಿ, ಅಕ್ರಮ ವಸ್ತುಗಳ ಕಳ್ಳ ಸಾಗಣೆ ನಡೆಸುವುದು ಸುಲಭವಾಗುವ ಆತಂಕಗಳಿವೆ.
ನದಿಗಳು ತಾವು ಹರಿಯುವ ಪಾತ್ರವನ್ನು ಆಗಾಗ್ಗೆ ಬದಲಾಯಿಸುತ್ತವೆ. ಆದ್ದರಿಂದ ಗಡಿಗಳೂ ಆಗಾಗ್ಗೆ ಬದಲಾಗುತ್ತವೆ. ಇದರ ಪರಿಣಾಮವಾಗಿ, ವಿಶೇಷವಾಗಿ ಉತ್ತರ ಬಂಗಾಳದಲ್ಲಿ ಗಡಿಯಾದ್ಯಂತ ಬೇಲಿಗಳನ್ನು ಅಳವಡಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಇದೆಲ್ಲ ಬೆಳವಣಿಗೆಗಳಿಂದ, ಅಕ್ರಮವಾಗಿ ಗಡಿ ದಾಟುವವರಿಗೆ ಮತ್ತು ಕಳ್ಳಸಾಗಣೆದಾರರಿಗೆ ಸುಲಭವಾಗಿ ದಾಟಲು ಬಹಳಷ್ಟು ಸುಲಭ ಸ್ಥಳಗಳನ್ನು ಒದಗಿಸಿವೆ.
ಇದನ್ನೂ ಓದಿ- ಚೆನ್ನೈ-ಬೆಂಗಳೂರು ಮಿಂಚಿನ ಸಂಚಾರ: ಐಐಟಿ ಮದ್ರಾಸಿನ ಹೈಪರ್‌ಲೂಪ್ ಕನಸು!
ಸುಲಭವಾಗಿ ದಾಟಬಹುದಾದ ಸುದೀರ್ಘ ಭಾರತ - ಬಾಂಗ್ಲಾದೇಶ ಗಡಿ
* ಭಾರತ - ಬಾಂಗ್ಲಾ ಗಡಿಯ ಒಟ್ಟು ಉದ್ದ: 4,096 ಕಿಲೋಮೀಟರ್
* ಪಶ್ಚಿಮ ಬಂಗಾಳದಲ್ಲಿರುವ ಗಡಿ: 2,217 ಕಿಲೋಮೀಟರ್
* ಪಶ್ಚಿಮ ಬಂಗಾಳದಲ್ಲಿ ಬೇಲಿ ರಹಿತ ಗಡಿ: 963 ಕಿಲೋಮೀಟರ್
* ಕೂಚ್ ಬೆಹಾರ್‌ನಲ್ಲಿ ಬೇಲಿ ರಹಿತ ಗಡಿ: 50 ಕಿಲೋಮೀಟರ್. (ಕೂಚ್ ಬೆಹಾರ್ ಎನ್ನುವುದು ಪಶ್ಚಿಮ ಬಂಗಾಳದ ಉತ್ತರ ಭಾಗದ ಜಿಲ್ಲೆಯಾಗಿದ್ದು, ಇದು ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿದೆ).
* ಕೂಚ್ ಬೆಹಾರ್‌ನಲ್ಲಿ ಧರ್ಲಾ ನದಿಯಂತಹ ನೈಸರ್ಗಿಕ ತಡೆಗಳು ಗಡಿಯಾಗಿ ಕಾರ್ಯ ನಿರ್ವಹಿಸುತ್ತಿವೆ.
* ನದಿ ಪಾತ್ರಗಳು ಆಗಾಗ ಬದಲಾಗುತ್ತಿರುವುದರಿಂದ, ಈ ಗಡಿಗಳನ್ನು ಸ್ಪಷ್ಟವಾಗಿ ಗುರುತಿಸಿ, ಬೇಲಿಯನ್ನು ಅಳವಡಿಸುವುದು ಅತ್ಯಂತ ಸವಾಲಿನ ಕಾರ್ಯವಾಗಿದೆ. ಇದು ಭದ್ರತೆಯಲ್ಲಿ ಹೊಸ ದೌರ್ಬಲ್ಯಕ್ಕೆ ಕಾರಣವಾಗಿದೆ.
* ಕೂಚ್ ಬೆಹಾರ್‌ನಲ್ಲಿರುವ ದ್ವೀಪಗಳು ಬಚ್ಚಿಟ್ಟುಕೊಳ್ಳಲು ಸೂಕ್ತ ತಾಣಗಳಾಗಿದ್ದು, ಅಕ್ರಮ ಚಟುವಟಿಕೆಗಳಿಗೆ ವಿಶ್ರಾಂತಿ ತಾಣಗಳೂ ಆಗಿವೆ.
* ಬೇಲಿ ಅಳವಡಿಸಿರದ ಗಡಿ ಪ್ರದೇಶಗಳು ಹಸುಗಳು, ಅಕ್ರಮ ವಸ್ತುಗಳು ಮತ್ತು ನಕಲಿ ಹಣದ ಕಳ್ಳಸಾಗಣೆ ನಡೆಸಲು ಸೂಕ್ತ ತಾಣಗಳಾಗಿವೆ.
ಹಿಂದೆ ನಡೆಯುತ್ತಿದ್ದ ಅಕ್ರಮ ನುಸುಳುವಿಕೆಯ ವೀಡಿಯೋಗಳು ಮಾಧ್ಯಮಗಳಲ್ಲೂ ಹರಿದಾಡಿದ್ದು, ಕೂಚ್ ಬೆಹಾರ್ ಇಂತಹ ಅಕ್ರಮ ಚಟುವಟಿಕೆಗಳಿಗೆ ಬಹುಮುಖ್ಯ ತಾಣವಾಗಿದೆ. ಸಂಪೂರ್ಣ ಕೂಚ್ ಬೆಹಾರ್ ಜಿಲ್ಲೆಯೇ ಸವಾಲಿನ ಭೂ ಪ್ರದೇಶ ಮತ್ತು ನದಿಗಳಿಂದ ಆವೃತವಾಗಿದ್ದು, ಅಕ್ರಮ ನುಸುಳುಕೋರರಿಗೆ ಮತ್ತು ಕಳ್ಳಸಾಗಣೆ ಕಾರ್ಯಾಚರಣೆಗಳಿಗೆ ಸೂಕ್ತ ಸ್ಥಳವಾಗಿದೆ.
ಅದರೊಡನೆ, ಭಾರತ ಗಡಿ ಭದ್ರತೆಗಾಗಿ ಕಡಿಮೆ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ಹೊಂದಿರುವುದು, ಈ ಪರಿಸ್ಥಿತಿಯನ್ನು ಇನ್ನಷ್ಟು ಕ್ಲಿಷ್ಟಕರವಾಗಿಸಿದೆ. ಅದರೊಡನೆ, ಭಾರತದಲ್ಲಿ ನಡೆಯುತ್ತಿರುವ ಚುನಾವಣೆಗಳ ಕಾರಣದಿಂದ, ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಸಿಬ್ಬಂದಿಗಳನ್ನು ಚುನಾವಣಾ ಭದ್ರತೆಗೆ ನಿಯೋಜಿಸುವುದರಿಂದ, ಗಡಿಯ ಕಾವಲಿಗೆ ಬಿಎಸ್ಎಫ್ ಬಳಿಯೂ ಸಿಬ್ಬಂದಿ ಕೊರತೆ ಎದುರಾಗಿದೆ. ಇದರಿಂದಾಗಿ ದುರ್ಗಮ ಪ್ರದೇಶಗಳ ಮೇಲೆ ನಿಗಾ ವಹಿಸಲು ಕಡಿಮೆ ಸಂಖ್ಯೆಯ ಅಧಿಕಾರಿಗಳು ಲಭ್ಯವಿದ್ದಾರೆ. ಗಡಿ ಭದ್ರತಾ ಸಿಬ್ಬಂದಿಯ ಕೊರತೆ ಇರುವುದೂ ಸಹ ಅಕ್ರಮ ನುಸುಳುಕೋರರಿಗೆ ಮತ್ತು ಕಳ್ಳಸಾಗಣೆದಾರರಿಗೆ ದುರ್ಗಮ ಪ್ರದೇಶಗಳ ಅನುಕೂಲತೆ ಪಡೆದುಕೊಂಡು, ಸಿಕ್ಕಿಬೀಳದಂತೆ ತಮ್ಮ ಚಟುವಟಿಕೆಗಳನ್ನು ಮುಂದುವರಿಸಲು ಪ್ರೋತ್ಸಾಹ ನೀಡಿದೆ.
ಇಂತಹ ಅಕ್ರಮ ನುಸುಳುವಿಕೆಗಳ ಹಿಂದೆ ಏಜೆಂಟರು ಮತ್ತು ಕಳ್ಳಸಾಗಣೆದಾರರ ಒಂದು ವ್ಯವಸ್ಥಿತ ಗುಂಪೇ ಕಾರ್ಯ ನಿರ್ವಹಿಸುತ್ತಿದೆ. ಈ ವ್ಯಕ್ತಿಗಳು ಅಧಿಕಾರಿಗಳಿಗೂ ಹಣ ನೀಡಿ, ಮುಕ್ತವಾಗಿ ಗಡಿಯನ್ನು ದಾಟಿ ಸಾಗಲು ಸಾಧ್ಯವಾಗುವಂತಹ ಪ್ರದೇಶಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೆ. ಅವರು ಗಡಿ ಭದ್ರತಾ ಪಡೆಯ ಗಸ್ತಿಗೆ ಸಿಕ್ಕಿ ಬೀಳದಂತೆ ನೈಸರ್ಗಿಕ ತಡೆಗಳಾದ ನದಿಗಳನ್ನು ಬಳಸಿಕೊಂಡು, ಬಹಳ ಸುಲಭವಾಗಿ ಗಡಿಯನ್ನು ದಾಟಿ ಭಾರತಕ್ಕೆ ತಲುಪಿಕೊಳ್ಳುತ್ತಾರೆ.
ಪ್ರಸ್ತುತ ಪರಿಸ್ಥಿತಿಯಲ್ಲಿ, ಭಾರತಕ್ಕೆ ಭದ್ರತಾ ಅಪಾಯಗಳು ಬಹಳ ಹೆಚ್ಚಾಗಿವೆ. ಉತ್ತರ ಬಂಗಾಳದ ಗಡಿಯಾದ್ಯಂತ ಅಕ್ರಮ ನುಸುಳುವಿಕೆಯ ಪ್ರಯತ್ನಗಳು ದಿನೇ ದಿನೇ ಬಹಳಷ್ಟು ಹೆಚ್ಚುತ್ತಿವೆ. ಇಲ್ಲಿನ ದುರ್ಬಲ ಭದ್ರತಾ ಪರಿಸ್ಥಿತಿಯನ್ನು ನುಸುಳುಕೋರರು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಗುಪ್ತಚರ ವರದಿಗಳಂತೂ ಉಗ್ರವಾದಿ ಗುಂಪುಗಳೂ ಭಾರತದೊಳಗೆ ನುಸುಳಿರುವ ಸಾಧ್ಯತೆಗಳ ಆತಂಕವನ್ನು ಹೊರಹಾಕಿವೆ. ಅದರಲ್ಲೂ ಬಾಂಗ್ಲಾದೇಶದಲ್ಲಿ ಈಗ ರಾಜಕೀಯ ಅಸ್ಥಿರತೆ ತಲೆದೋರಿರುವುದು ಇದಕ್ಕೆ ಬಹಳಷ್ಟು ನೆರವು ನೀಡಿದೆ.
ಶೇಖ್ ಹಸೀನಾ ಅಧಿಕಾರದಿಂದ ಪದಚ್ಯುತರಾದ ಬಳಿಕ ಬಾಂಗ್ಲಾದೇಶದಲ್ಲಿ ತಲೆದೋರಿರುವ ಪರಿಸ್ಥಿತಿ ನಿಜಕ್ಕೂ ಆತಂಕ ಸೃಷ್ಟಿಸಿದೆ. ಒಂದು ವೇಳೆ, ಬಾಂಗ್ಲಾದೇಶದಲ್ಲಿ ಭಯೋತ್ಪಾದನಾ ಅಪಾಯಗಳು ಮತ್ತು ಆಂತರಿಕ ಕ್ಷೋಭೆಗಳು ಹೆಚ್ಚಾದರೆ, ತೀವ್ರವಾದಿ ಗುಂಪುಗಳು ಭಾರತದೊಳಗೆ ನುಸುಳುವ ಸಾಧ್ಯತೆಗಳೂ ಹೆಚ್ಚಿವೆ. ಅದರೊಡನೆ, ಬಾಂಗ್ಲಾದೇಶದಲ್ಲಿ ಆಧುನಿಕ ಡ್ರೋನ್‌ಗಳ ಬಳಕೆ ಹೆಚ್ಚಾಗುತ್ತಿರುವ ಕುರಿತು ವರದಿಗಳು ಬಂದಿದ್ದು, ಇದು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ. ಇದರಿಂದಾಗಿ ಭಾರತದ ಭದ್ರತಾ ಪಡೆಗಳಿಗೆ ಗಡಿ ಪ್ರದೇಶದ ನಿರ್ವಹಣೆಯಲ್ಲಿ ಬಹಳಷ್ಟು ಕಷ್ಟಗಳು ಎದುರಾಗುತ್ತಿವೆ.
ಭಾರತ ಸರ್ಕಾರ ಗಡಿ ಪ್ರದೇಶಗಳ ಮೂಲಭೂತ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಆದರೆ, ಬಾಂಗ್ಲಾದೇಶದ ಜೊತೆಗಿನ ಗಡಿ ಅತ್ಯಂತ ಸುದೀರ್ಘ ಮತ್ತು ಸಂಕೀರ್ಣವಾಗಿದ್ದು, ಇದಕ್ಕೆ ಭಾರತ ತೀಕ್ಷ್ಣವಾದ ಕ್ರಮಗಳನ್ನೇ ಕೈಗೊಳ್ಳುವ ಅನಿವಾರ್ಯತೆಯಿದೆ.
ಇದನ್ನೂ ಓದಿ- ಮಾನವ ದೇಹದ ಮೇಲೆ ಬಾಹ್ಯಾಕಾಶದ ಪರಿಣಾಮಗಳು: ಗಿರೀಶ್ ಲಿಂಗಣ್ಣ
ಭಾರತ ಡ್ರೋನ್‌ಗಳು, ಸೆನ್ಸರ್‌ಗಳು, ಮತ್ತು ಥರ್ಮಲ್ ಇಮೇಜಿಂಗ್‌ನಂತಹ ಆಧುನಿಕ ತಂತ್ರಜ್ಞಾನಗಳನ್ನು ಹೆಚ್ಚಾಗಿ ಬಳಸುವುದು ಈಗ ಅವಶ್ಯಕವಾಗಿದೆ. ಅದರೊಡನೆ, ಭಾರತದಲ್ಲಿ ಚುನಾವಣೆಗಳು ನಡೆಯುತ್ತಿದ್ದರೂ ಗಡಿ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಗಳು ಸದಾ ಕಾಲವೂ ಉಪಸ್ಥಿತರಿದ್ದು, ದುರ್ಗಮ ಪ್ರದೇಶಗಳ ಮೇಲೂ ಕಣ್ಣಿಡುವುದು ಎಲ್ಲಕ್ಕಿಂತ ಮುಖ್ಯವಾಗಿದೆ.
ಕಳ್ಳಸಾಗಣೆ ಜಾಲದ ವಿರುದ್ಧ ಗಂಭೀರ ಕ್ರಮಗಳನ್ನು ಕೈಗೊಳ್ಳುವುದು ಸಹ ಬಹಳ ಮುಖ್ಯವಾಗಿದೆ. ಇಂತಹ ಸಂಘಟಿತ ಅಕ್ರಮ ಕಾರ್ಯಗಳ ವ್ಯವಸ್ಥೆಯನ್ನು ಮುರಿದು, ಗಡಿಯಾದ್ಯಂತ ದೌರ್ಬಲ್ಯಗಳನ್ನು ಇಲ್ಲವಾಗಿಸಲು ನಿರಂತರವಾಗಿ ಪ್ರಯತ್ನ ನಡೆಸಬೇಕಿದೆ.
ಭಾರತ - ಬಾಂಗ್ಲಾದೇಶದ ಗಡಿ ಭೂಪಟದಲ್ಲಿ ಕಾಣುವ ಒಂದು ಗೆರೆಗಿಂತ ಬಹಳ ಹೆಚ್ಚಿನದಾಗಿದೆ. ಇದು ಭಾರತದ ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವಲ್ಲಿ ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ.
ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಭಾರತದ ಭದ್ರತಾ ಪಡೆಗಳಿಗೆ ತಮ್ಮ ಸುದೀರ್ಘ, ಸುಲಭವಾಗಿ ದಾಟಬಹುದಾದ ಗಡಿಯನ್ನು ಸುರಕ್ಷಿತವಾಗಿಸುವ ಸವಾಲುಗಳೂ ಹೆಚ್ಚುತ್ತಿವೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ, ರಕ್ಷಣಾ ಮತ್ತು ಅಂತಾರಾಷ್ಟ್ರೀಯ ವಿಶ್ಲೇಷಕ)
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.