ಶಾಂತಿ ಮುಖ್ಯ, ಆದರೆ ಆತ್ಮ ಗೌರವ ಬಲಿಕೊಡಲು ಸಾಧ್ಯವಿಲ್ಲ; ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿ
ಗಡಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ದೇಶದ ರಕ್ಷಣೆಗೆ ನಾವು ಬದ್ಧ. ಉಗ್ರರಿಗೆ ನಾವು ತಕ್ಕ ಪಾಠ ಕಲಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು.
ನವದೆಹಲಿ: ಭಾರತ ಶಾಂತಿಯನ್ನು ಕಾಪಾಡುತ್ತದೆ ಮತ್ತು ಅದನ್ನು ಎಲ್ಲೆಡೆ ಹರಡಲು ಪ್ರಯತ್ನಿಸುತ್ತದೆ. ಆದರೆ, ಆತ್ಮಗೌರವದ ವಿಚಾರಕ್ಕೆ ಬಂದರೆ ಎಂದಿಗೂ ರಾಜಿಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾನುವಾರ ಪ್ರಸಾರವಾದ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸರ್ಜಿಕಲ್ ಸ್ಟ್ರೈಕ್ ನೆನಪಿಗಾಗಿ ಶನಿವಾರ ದೇಶಾದ್ಯಂತ ‘ಪರಾಕ್ರಮಪರ್ವ’ ಆಚರಿಸಲಾಯಿತು. ಭಾರತದ ಪ್ರತಿ ನಾಗರಿಕರಿಗೂ ನಮ್ಮ ಯೋಧರ ಬಗ್ಗೆ ಹೆಮ್ಮೆ ಇದೆ. ಭಯೋತ್ಪಾನೆ, ಗಡಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ದೇಶದ ರಕ್ಷಣೆಗೆ ನಾವು ಬದ್ಧ. ಉಗ್ರರಿಗೆ ನಾವು ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ವಿಶ್ವಯುದ್ಧದ ಸಂದರ್ಭದಲ್ಲಿ ಸಂಬಂಧವೇ ಇಲ್ಲದ ಯುದ್ಧದಲ್ಲಿ ದೇಶದ ಸೈನಿಕರು ಸಾವನ್ನಪ್ಪಿದ್ದರು. ಇದರಿಂದಲೇ ತಿಳಿಯುತ್ತದೆ ನಮ್ಮ ಧ್ಯೇಯ ಕೇವಲ ವಿಶ್ವಶಾಂತಿ. ಇದೇ ಕಾರಣಕ್ಕಾಗಿ ವಿಶ್ವಯುದ್ಧದಲ್ಲಿ ನಮ್ಮ ಸೈನಿಕರು ಪಾಲ್ಗೊಂಡಿದ್ದರು. ಹಾಗಾಗಿ ವಿಶ್ವ ಶಾಂತಿಗಾಗಿ ಭಾರತದ ಪಾತ್ರ ಬಹಳ ದೊಡ್ಡದು ಎಂದು ಪ್ರಧಾನಿ ಮೋದಿ ಹೇಳಿದರು.
ಈ ಬಾರಿ ಅಕ್ಟೋಬರ್ 2ರಂದು ಗಾಂಧಿ ಜಯಂತಿ ವಿಶೇಷವಾಗಿರಲಿದ್ದು, ಮಹಾತ್ಮ ಗಾಂಧಿಯ 150ನೇ ವರ್ಷಾಚರಣೆ ನಡೆಯಲಿದೆ. ಗಾಂಧೀಜಿ ತತ್ವ, ಆದರ್ಶಗಳು ಇಂದಿಗೂ ಪ್ರಸ್ತುತ ಎಂದು ಪ್ರಧಾನಿ ನರೇಂದ್ರ ಮೋದಿ ಇದೇ ಸಂದರ್ಭದಲ್ಲಿ ನುಡಿದರು.