ನವದೆಹಲಿ: ಜಾಗತಿಕ ಅನಿಶ್ಚಿತತೆ ಸಂದರ್ಭಗಳಲ್ಲಿ ನವದೆಹಲಿ ಮತ್ತು ಚೀನಾ ನಡುವಿನ ಸಂಬಂಧ ಸ್ಥಿರತೆಯ ಅಂಶವಾಗಿರಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬಹಳ ಹಿಂದೆಯೇ ಅರಿತುಕೊಂಡಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್.ಜಯಶಂಕರ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಚೀನಾ ಪ್ರವಾಸದಲ್ಲಿರುವ ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು, ಉಭಯ ದೇಶಗಳ ನಡುವಿನ ಸಂಬಂಧಗಳ ಕುರಿತು ಬೀಜಿಂಗ್‌ನಲ್ಲಿ ಮಾತನಾಡುತ್ತಾ, ಭಾರತ ಮತ್ತು ಚೀನಾ ನಡುವಿನ ಸಂಬಂಧವು 'ಜಾಗತಿಕ ರಾಜಕೀಯದಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದೆ' ಎಂದು ಹೇಳಿದರು.


"ಜಾಗತಿಕ ರಾಜಕಾರಣದಲ್ಲಿ ಭಾರತ-ಚೀನಾ ಸಂಬಂಧಕ್ಕೆ ವಿಶಿಷ್ಟ ಸ್ಥಾನವಿದೆ. ಎರಡು ವರ್ಷಗಳ ಹಿಂದೆ, ನಮ್ಮ ನಾಯಕರು ಆ ವಾಸ್ತವವನ್ನು ಅರಿತು, ಜಾಗತಿಕ ಅನಿಶ್ಚಿತತೆಯ ಸಮಯದಲ್ಲಿ ಭಾರತ-ಚೀನಾ ಸಂಬಂಧವು ಸ್ಥಿರತೆಯ ಅಂಶವಾಗಿರಬೇಕು ಎಂಬ ಒಮ್ಮತದ ನಿರ್ಧಾರಕ್ಕೆ ಬಂದಿವೆ. ಹಾಗಾಗಿ ಈ ಸಂಬಂಧ ಸ್ಥಿರವಾಗಿರಲು ಉಭಯ ದೇಶಗಳ ನಡುವೆ ಯಾವುದೇ ವಿವಾದಗಳಾಗಬಾರದು ಎಂಬುದು ಕಡ್ಡಾಯ" ಎಂದು ಜೈಶಂಕರ್ ಹೇಳಿದರು.


ಇದಕ್ಕೂ ಮುನ್ನ ಸೋಮವಾರ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮತ್ತು ಉಪಾಧ್ಯಕ್ಷ ವಾಂಗ್ ಕಿಶನ್ ಅವರನ್ನು ಭೇಟಿ ಮಾಡಿದರು. ಈ ವರ್ಷಾಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವಿನ ಎರಡನೇ ಅನೌಪಚಾರಿಕ ಶೃಂಗಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಜೈಶಂಕರ್ ಅವರು ಭೇಟಿ ನೀಡಿದ್ದಾರೆ.