ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ರನ್ನು ಶೀಘ್ರವೇ ಬಿಡುಗಡೆ ಮಾಡಬೇಕು. ಅಭಿನಂದನ್‌ಗೆ ಏನಾದರೂ ಸಣ್ಣ ತೊಂದರೆಯಾದರೂ ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತೇವೆ ಎಂದು ಭಾರತ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದೆ.


COMMERCIAL BREAK
SCROLL TO CONTINUE READING

ವಿಂಗ್ ಕಮಾಂಡರ್ ಅಭಿನಂದನ್‌ರನ್ನು ಗೌರವಯುವವಾಗಿ ಭಾರತಕ್ಕೆ ಮರಳಿಸಿ ಎಂದು ಪಾಕಿಸ್ತಾನದಲ್ಲಿನ ಭಾರತೀಯ ಹೈಕಮಿಷನ್‌ ಪಾಕ್‌ ವಿದೇಶ ಸಚಿವಾಲಯಕ್ಕೆ ಡಿಮಾರ್ಶೆ ಹೊರಡಿಸಿದೆ. ಇದೇ ರೀತಿಯ ಡಿಮಾರ್ಶೆಯನ್ನು ಭಾರತದಲ್ಲಿರುವ ಪಾಕಿಸ್ತಾನದ ಪ್ರಭಾರ ಹೈಕಮಿಷನರ್‌ಗೆ ಕೂಡ ನೀಡಲಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ತಿಳಿಸಿದೆ. 


ಭಾರತೀಯ ಪೈಲಟ್‌ ಗೆ ಯಾವುದೇ ರೀತಿಯ ಹಿಂಸೆ, ಕಿರುಕುಳ ನೀಡದೆ, ಆತನನ್ನು ಗೌರವದೊಂದಿಗೆ ನಡೆಸಿಕೊಂಡು ಭಾರತಕ್ಕೆ ಮರಳಿಸಬೇಕು ಮತ್ತು ಪಾಕಿಸ್ತಾನ ತನ್ನ ಈ ಅಂತಾರಾಷ್ಟ್ರೀಯ ಬದ್ಧತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಡಿಮಾರ್ಶೆ ಮೂಲಕ ತಿಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.


ಪಾಕಿಸ್ತಾನ ಸೇನೆಗೆ ಸೆರೆ ಸಿಕ್ಕ ಭಾರತೀಯ ಪೈಲಟ್ ಅಭಿನಂದನ್ ವರ್ಧಮಾನ್ ಅವರ ಬಿಡುಗಡೆಗೆ ನಾವು ಸಿದ್ಧ. ಆದರೆ, ಭಾರತವು ಗಡಿಯಿಂದ ಸೇನೆಯನ್ನು ವಾಪಸ್ ಕರೆಸಿಕೊಂಡರೆ ನಾವು ಅಭಿನಂದನ್ ಅವರನ್ನು ಬಿಡುಗಡೆ ಮಾಡುತ್ತೇವೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ ಹೇಳಿದ್ದಾರೆ.


ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ, 'ಏರ್ ಸ್ಟ್ರೈಕ್ ಭಯೋತ್ಪಾದನೆ ವಿರುದ್ಧವಾದದ್ದು. ನಮ್ಮ ಕಾರ್ಯಾಚರಣೆಯಲ್ಲಿ ಮಿಲಿಟರಿ ಪಡೆಗಾಗಲಿ ಅಥವಾ ನಾಗರೀಕರಿಗಾಗಲಿ ಯಾವುದೇ ಹಾನಿಯಾಲಿಲ್ಲ. ಈ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ' ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ಪಾಕಿಸ್ತಾನಕ್ಕೆ ತಿಳಿಸಿವೆ.


'ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ಮಾನವೀಯ ದೃಷ್ಟಿಯಿಂದ ಮತ್ತು ಘನತೆಯಿಂದ ನಡೆಸಿಕೊಳ್ಳಬೇಕು. ಅವರನ್ನು ಯಾವುದೇ ಶರತ್ತುಗಳಿಲ್ಲದೆ ಶೀಘ್ರವೇ ಬಿಡುಗಡೆ ಮಾಡಬೇಕು. ಇಲ್ಲವೆಂದರೆ ಸುಮ್ಮನಿರುವುದಿಲ್ಲ' ಎಂದು ಭಾರತ ಎಚ್ಚರಿಕೆ ನೀಡಿದೆ.