ಪ್ರಧಾನಿ ನರೇಂದ್ರ ಮೋದಿ ಮಹತ್ವದ ಘೋಷಣೆ: ಮಿಷನ್ ಶಕ್ತಿ ಯಶಸ್ವಿ, ಲೈವ್ ಸ್ಯಾಟೆಲೈಟ್ ಹೊಡೆದುರುಳಿಸಿದ ವಿಜ್ಞಾನಿಗಳು!
ಬಾಹ್ಯಾಕಾಶದ ಲೋ ಅರ್ಥ್ ಆರ್ಬಿಟ್ ನಲ್ಲಿ ಎ-ಸ್ಯಾಟ್ ಆ್ಯಂಟಿ ಸ್ಯಾಟೆಲೈಟ್ ಮಿಸೈಲ್ ಮೂಲಕ ಲೈವ್ ಸ್ಯಾಟೆಲೈಟ್ ಅನ್ನು ಯಶಸ್ವಿಯಾಗಿ ಹೊಡೆದುರುಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.
ನವದೆಹಲಿ: ಅಂತರಿಕ್ಷದಲ್ಲಿ ಭಾರತ ಇಂದು ಮಹತ್ಸಾಧನೆ ಮಾಡಿದ್ದು, ಬಾಹ್ಯಾಕಾಶದಲ್ಲಿ ಇದೇ ಮೊದಲ ಬಾರಿಗೆ ಇಂದು ಬೆಳಿಗ್ಗೆ ಲೋ ಆರ್ಬಿಟ್ ಲೈವ್ ಸ್ಯಾಟಲೈಟ್ ಅನ್ನು ವಿಜ್ಞಾನಿಗಳು ಹೊಡೆದುರುಳಿಸಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಬುಧವಾರ ಮಧ್ಯಾಹ್ನ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಾಹ್ಯಾಕಾಶದ ಲೋ ಅರ್ಥ್ ಆರ್ಬಿಟ್ ನಲ್ಲಿ ಎ-ಸ್ಯಾಟ್ ಆ್ಯಂಟಿ ಸ್ಯಾಟೆಲೈಟ್ ಮಿಸೈಲ್ ಮೂಲಕ ಲೈವ್ ಸ್ಯಾಟೆಲೈಟ್ ಅನ್ನು ಯಶಸ್ವಿಯಾಗಿ ಹೊಡೆದುರುಳಿಸಿದೆ. ಈ ಮಿಷನ್ ಶಕ್ತಿ ಕಾರ್ಯಾಚರಣೆ ಮೂಲಕ ಭಾರತದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದ ಭಾರತದ ಹೆಮ್ಮೆಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಡಿಆರ್ ಡಿಒ ವಿಜ್ಞಾನಿಗಳಿಗೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಇದುವರೆಗೂ ಜಗತ್ತಿನ ಕೇವಲ ಮೂರು ರಾಷ್ಟ್ರಗಳಾದ ಅಮೇರಿಕಾ, ಚೀನಾ ಹಾಗೂ ರಷ್ಯಾ ಬಳಿ ಮಾತ್ರವೇ ಈ ಸಾಮರ್ಥ್ಯವಿತ್ತು. ಇದೀಗ ಭಾರತದ ಹೆಸರೂ ಸಹ ಆ ಪಟ್ಟಿಯಲ್ಲಿ ಸೇರುವಂತಾಗಿದೆ. ಹಲವು ವರ್ಷಗಳಿಂದ ಭಾರತ ಕೂಡ ಲೋ ಆರ್ಬಿಟ್ ಸ್ಯಾಟಲೈಟ್‌ಗಳನ್ನ ಅಂತರೀಕ್ಷದಲ್ಲೇ ಹೊಡೆದುರುಳಿಸುವ ಕ್ಷಿಪಣಿ ಬಗ್ಗೆ ಪರೀಕ್ಷೆಯನ್ನು ನಡೆಸಿತ್ತು. ಇದಕ್ಕಾಗಿಯೇ ಶಕ್ತಿ ಮಿಷನ್ ಎಂಬ ಯೋಜನೆ ಕೈಗೊಂಡಿತ್ತು. ಇದೀಗ ಆ ಮಿಷನ್ ಶಕ್ತಿ ಯಶಸ್ವಿಯಾಗಿದೆ ಎಂದು ಮೋದಿ ಹೇಳಿದರು.
'ಮಿಷನ್ ಶಕ್ತಿ' ಒಂದು ಶತ್ರು ರಾಷ್ಟ್ರಗಳ ಸ್ಯಾಟಲೈಟ್ ಪ್ರತಿರೋಧಕ ತಂತ್ರಜ್ಞಾನವಾಗಿದ್ದು, ಈ ಕ್ಷಿಪಣಿಗಳು ಶತ್ರು ರಾಷ್ಟ್ರದ ಉಪಗ್ರಹಗಳನ್ನು ಬಾಹ್ಯಾಕಾಶದಲ್ಲೇ ಹೊಡೆದು ಹಾಕಬಲ್ಲವು. ಇಂದು ನಡೆದ ಕಾರ್ಯಾಚರಣೆಯಲ್ಲಿ ಮೂರೇ ನಿಮಿಷದಲ್ಲಿ ಶಕ್ತಿ ಮಿಷನ್ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಯಿಂದ ದೇಶದ ಗೌರವ ಹೆಚ್ಚಾಗಿದೆ. ಮಿಶನ್ ಶಕ್ತಿ Anti-satellite ಭಾರತದ ಬಾಹ್ಯಾಕಾಶ ಲೋಕದ ಹೊಸ ಶಕ್ತಿಯಾಗಿದ್ದು, ಈ ತಂತ್ರಜ್ಞಾನವನ್ನು ದೇಶದ ಭದ್ರತೆಗಾಗಿ ಬಳಸುತ್ತೇವೆಯೇ ಹೊರತು ಬೇರಾವುದೇ ದೇಶಗಳ ವಿರುದ್ಧ ಬಳಸುವುದಿಲ್ಲ ಎಂದು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.