ಇಸ್ಲಾಮಾಬಾದ್: ಕಾಶ್ಮೀರ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದರೂ, ಕರ್ತಾರ್‌ಪುರ ಕಾರಿಡಾರ್ ಯೋಜನೆ ಕುರಿತು ಚರ್ಚಿಸಲು ಉಭಯ ದೇಶಗಳ ಅಧಿಕಾರಿಗಳು ಶುಕ್ರವಾರ ಸಭೆ ಸೇರಲಿದ್ದಾರೆ. ಬಾರ್ಡರ್‌ನ ಜೀರೋ ಪಾಯಿಂಟ್‌ನಲ್ಲಿ ಶುಕ್ರವಾರ ಉಭಯ ತಂಡಗಳು ತಾಂತ್ರಿಕ ಸಭೆ ನಡೆಸಲಿವೆ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಜಲ್ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಕುರಿತು ಗುರುವಾರ ಮಾಹಿತಿ ನೀಡಿದ ಫೈಜಲ್, "ಕಾರ್ತಾರ್‌ಪುರ್ ಸಾಹಿಬ್ ಕಾರಿಡಾರ್‌ಗೆ ಸಂಬಂಧಿಸಿದ ಪಾಕಿಸ್ತಾನದ ಪ್ರಸ್ತಾವನೆ ಮತ್ತು ತಾಂತ್ರಿಕ ಸಭೆ ಭಾರತದೊಂದಿಗೆ ಆಗಸ್ಟ್ 30 ರಂದು ಜೀರೋ ಪಾಯಿಂಟ್‌ನಲ್ಲಿ ನಡೆಯಲಿದೆ" ಎಂದು ಹೇಳಿದರು.


"ಪಾಕಿಸ್ತಾನ ಪ್ರಧಾನ ಮಂತ್ರಿ ಘೋಷಣೆಯಂತೆ ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ಅನ್ನು ಪೂರ್ಣಗೊಳಿಸಲು ಮತ್ತು ಉದ್ಘಾಟಿಸಲು ಬದ್ಧವಾಗಿದೆ" ಎಂದು ಅವರು ಹೇಳಿದರು. ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಅವರ 550 ನೇ ಜನ್ಮ ದಿನಾಚರಣೆಯ ಒಳಗೆ ಗಡಿಯಾಚೆಗಿನ ಕರ್ತಾರ್‌ಪುರ ಕಾರಿಡಾರ್ ಯೋಜನೆಯ ಕೆಲಸವನ್ನು ಪೂರ್ಣಗೊಳಿಸುವುದಾಗಿ ಪಾಕಿಸ್ತಾನ ಹೇಳಿದೆ.


ಪಾಕಿಸ್ತಾನದ ರಾವಿ ನದಿಯ ದಡದಲ್ಲಿರುವ ಕರ್ತಾರ್‌ಪುರ ಗುರುದ್ವಾರ ಭಾರತದ ಗುರುದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ದೇಗುಲದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿದೆ ಮತ್ತು ಇದು ಲಾಹೋರ್‌ನಿಂದ ಈಶಾನ್ಯಕ್ಕೆ 120 ಕಿಲೋಮೀಟರ್ ದೂರದಲ್ಲಿದೆ. ಗುರುನಾನಕ್ 1939 ರಿಂದ ಅವರ ಕೊನೆಯ ಕಾಲದವರೆಗೆ18 ವರ್ಷಗಳ ಕಾಲ ಅಲ್ಲಿ ವಾಸಿಸುತ್ತಿದ್ದರು. ಹೀಗಾಗಿಯೇ ಅದನ್ನು  ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಅವರ ಪುಣ್ಯ ಸ್ಥಳ ಎಂದು ಹೇಳಲಾಗುತ್ತದೆ.


ಈ ತಿಂಗಳು ಜಮ್ಮು ಮತ್ತು ಕಾಶ್ಮೀರದ ವಿಶೇಷ ರಾಜ್ಯ ಸ್ಥಾನಮಾನವನ್ನು ಕೊನೆಗೊಳಿಸಿದ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿತು.