ನವದೆಹಲಿ: ಭಾರತೀಯ ವಾಯುಸೇನೆ ಜೈಷ್ ಸಂಘಟನೆಯ ಉಗ್ರರ ಅಡಗುತಾಣಗಳ ಮೇಲೆ ನಡೆಸಿದ ಏರ್ ಸ್ಟ್ರೈಕ್ ನಲ್ಲಿ  ಬಾಲಕೋಟ್ ಜೈಷ್ ಎ ಮೊಹಮ್ಮದ್ ಕ್ಯಾಂಪ್ ಸಂಪೂರ್ಣವಾಗಿ ಧ್ವಂಸವಾಗಿದೆ. ಇದರಲ್ಲಿ ಜೈಷ್ ಕಮಾಂಡರ್ ಸೇರಿದಂತೆ ನೂರಾರು ಉಗ್ರರರನ್ನು ಸದೆಬಡಿಯಲಾಗಿದೆ ಎಂದು ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಮಂಗಳವಾರ ಬೆಳಗಿನ ಜಾವ ಭಾರತೀಯ ವಾಯುಪಡೆಯ ಮಿರಾಜ್ 2000 ಯುದ್ದವಿಮಾನಗಳು ಎಲ್ಒಸಿ ದಾಟಿ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿದ್ದ ಉಗ್ರ ತರಬೇತಿ ಶಿಬಿರಗಳನ್ನು ನಾಶಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.


ಜೈಶ್-ಎ-ಮೊಹಮ್ಮದ್ ಉಗ್ರರು ಭಾರತದಲ್ಲಿ ಮತ್ತಷ್ಟು ಉಗ್ರ ಚಟುವಟಿಕೆ ನಡೆಸಲು ಯತ್ನಿಸಿದ್ದರು. ಇದಕ್ಕೆ ಪಾಕ್ ಮೂಲದ ಉಗ್ರಸಂಘಟನೆ ಜೈಶ್-ಎ- ಮಹಮ್ಮದ್ ಸಂಚು ಮಾಡಿರುವುದು ಮಾತ್ರವಲ್ಲದೆ, ಪಾಕ್ ಗಡಿಭಾಗದಲ್ಲಿ ಆತ್ಮಾಹುತಿ ದಾಳಿಗೆ ತರಬೇತಿ ನೀಡುವ ಶಿಬಿರಗಳನ್ನು ನಡೆಸುತ್ತಿತ್ತು. ಭಾರತದ ಹಲವು ಭಾಗಗಳಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಸಂಚು ರೂಪಿಸಿರುವುದಾಗಿ ನಮ್ಮ ಗುಪ್ತಚರ ಇಲಾಖೆಯು ಖಚಿತ ಮಾಹಿತಿಯನ್ನು ನೀಡಿತ್ತು. ಮುಂಜಾಗ್ರತಾ ಕ್ರಮವಾಗಿ ಇಂದು ನಮ್ಮ ವಾಯುಪಡೆಯ ಯುದ್ಧವಿಮಾನಗಳು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಬಾಲ್ಕಟ್ ಪ್ರದೇಶದಲ್ಲಿ ದಾಳಿ ನಡೆಸುವುದು ಅನಿವಾರ್ಯವಾಗಿತ್ತು ಎಂದು ಅವರು ಮಾಹಿತಿ ನೀಡಿದರು.



ಉಗ್ರರ ಶಿಬಿರಗಳನ್ನೇ ಗುರಿಯಾಗಿರಿಸಿ ಕಾರ್ಯಾಚರಣೆ ಮಾಡಲಾಗಿದೆ. ಗಡಿ ನಿಯಂತ್ರಣ ರೇಖೆಯಲ್ಲಿರುವ ಜೈಷ್ ಉಗ್ರ ಸಂಘಟನೆಯ ಅಡಗುದಾಣಗಳ ಮೇಲೆ ಕಳೆದ ರಾತ್ರಿ 3.30ರ ಸುಮಾರಿಗೆ 12 ಮಿರಾಜ್-2000 ಯುದ್ಧ ವಿಮಾನಗಳು 1000 ಕೆಜಿ ಬಾಂಬ್ ದಾಳಿ ಮಾಡಿದ್ದು ಪರಿಣಾಮ 500 ಮೀಟರ್ ಪ್ರದೇಶ ಸಂಪೂರ್ಣ ಸರ್ವನಾಶವಾಗಿದೆ. ಈ ಏರ್ ಸ್ಟ್ರೈಕ್ ನಲ್ಲಿ ಜೈಷ್ ಕಮಾಂಡರ್ ಸೇರಿದಂತೆ ನೂರಾರು ಉಗ್ರರರನ್ನು ಸದೆಬಡಿಯಲಾಗಿದೆ. ಆದರೆ ಎಷ್ಟು ಉಗ್ರರು ಮೃತಪಟ್ಟಿದ್ದಾರೆ ಎಂಬ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದರು.