ಭಾರತೀಯ ವಾಯುಪಡೆಯ ದಿನಾಚರಣೆ : ಭಾರತಕ್ಕೆ 91 ವರ್ಷಗಳ ಸೇವೆ ಮತ್ತು ಶೌರ್ಯ
ಭಾರತೀಯ ವಾಯುಪಡೆಯನ್ನು 1932ರಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಾಯುಪಡೆಗೆ ಸಹಾಯಕ ಪಡೆಯಾಗಿ ಆರಂಭಿಸಲಾಯಿತು. ಇದು ಆರು ರಾಯಲ್ ಏರ್‌ಫೋರ್ಸ್ (ಆರ್‌ಎಎಫ್) ತರಬೇತಿ ಪಡೆದ ಅಧಿಕಾರಿಗಳು ಮತ್ತು 19 ಹವಾಯಿ ಸಿಪಾಯಿಗಳನ್ನು (ಅಂದರೆ, ವಾಯು ಸೈನಿಕರು ಎಂದರ್ಥ) ಒಳಗೊಂಡಿತ್ತು.
Indian air force day 2023 : ಭಾರತೀಯ ವಾಯುಪಡೆಯ ದಿನಾಚರಣೆಯನ್ನು ಪ್ರತಿವರ್ಷ ಅಕ್ಟೋಬರ್ 8ರಂದು ಆಚರಿಸಲಾಗುತ್ತದೆ. ಈ ದಿನ 1932ರಂದು ಭಾರತೀಯ ವಾಯುಪಡೆ (ಐಎಎಫ್) ಅನ್ನು ಸ್ಥಾಪಿಸಿದ ದಿನದ ನೆನಪಿಗೆ ಭಾರತೀಯ ವಾಯುಪಡೆಯ ದಿನವನ್ನು ಆಚರಿಸಲಾಗುತ್ತದೆ. ಭಾರತೀಯ ವಾಯುಪಡೆ ಭಾರತದ ಸೇನಾಪಡೆಗಳ ವಾಯು ವಿಭಾಗವಾಗಿದ್ದು, ಭಾರತದ ವಾಯುಪ್ರದೇಶವನ್ನು ಸುರಕ್ಷಿತವಾಗಿಡಲು ಮತ್ತು ಯುದ್ಧದ ಸಂದರ್ಭದಲ್ಲಿ ವಾಯುದಾಳಿಗಳನ್ನು ನಡೆಸಲು ಬಳಕೆಯಾಗುತ್ತದೆ. ಭಾರತೀಯ ವಾಯುಪಡೆ ತನ್ನ ಮಾನವೀಯ ಕಾರ್ಯಾಚರಣೆಗಳು ಮತ್ತು ವಿಕೋಪ ಪರಿಹಾರ ಕಾರ್ಯಾಚರಣೆಗಳಿಗಾಗಿ ಹೆಸರಾಗಿದೆ. ಅದರೊಡನೆ, ಭಾರತೀಯ ವಾಯುಪಡೆ ಹಲವಾರು ಶಾಂತಿಸ್ಥಾಪನಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದೆ.
ಭಾರತೀಯ ವಾಯುಪಡೆ ಶೌರ್ಯ ಮತ್ತು ತ್ಯಾಗಗಳ ಶ್ರೀಮಂತ ಇತಿಹಾಸವನ್ನೇ ಹೊಂದಿದೆ. ಭಾರತೀಯ ವಾಯುಪಡೆಯನ್ನು 1932ರಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಾಯುಪಡೆಗೆ ಸಹಾಯಕ ಪಡೆಯಾಗಿ ಆರಂಭಿಸಲಾಯಿತು. ಇದು ಆರು ರಾಯಲ್ ಏರ್‌ಫೋರ್ಸ್ (ಆರ್‌ಎಎಫ್) ತರಬೇತಿ ಪಡೆದ ಅಧಿಕಾರಿಗಳು ಮತ್ತು 19 ಹವಾಯಿ ಸಿಪಾಯಿಗಳನ್ನು (ಅಂದರೆ, ವಾಯು ಸೈನಿಕರು ಎಂದರ್ಥ) ಒಳಗೊಂಡಿತ್ತು. ಭಾರತೀಯ ವಾಯುಪಡೆಯ ಮೊದಲ ಕಾರ್ಯಾಚರಣಾ ಸ್ಕ್ವಾಡ್ರನ್ ಆದ ನಂಬರ್ 1 ಸ್ಕ್ವಾಡ್ರನ್ ಅನ್ನು 1933ರ ಎಪ್ರಿಲ್ 1ರಂದು ಆರಂಭಿಸಲಾಯಿತು. ಭಾರತೀಯ ವಾಯುಪಡೆ ಎರಡನೇ ಮಹಾಯುದ್ಧದಲ್ಲಿ ಭಾಗಿಯಾಗಿ, ಶತ್ರು ಪಾಳಯದ ವಿರುದ್ಧ ಬರ್ಮಾ, ಉತ್ತರ ಆಫ್ರಿಕಾ, ಇಟಲಿ, ಮತ್ತು ಯುರೋಪ್‌ಗಳಲ್ಲಿ ಸೆಣಸಾಡಿತು. ಭಾರತ 1947ರಲ್ಲಿ ಸ್ವಾತಂತ್ರ್ಯ ಗಳಿಸಿದ ಬಳಿಕ, ಭಾರತೀಯ ವಾಯುಪಡೆಗೆ ರಾಯಲ್ ಇಂಡಿಯನ್ ಏರ್‌ಫೋರ್ಸ್ (ಆರ್‌ಐಎಎಫ್) ಎಂದು ಹೆಸರಿಡಲಾಯಿತು. ಬಳಿಕ 1950ರಲ್ಲಿ ಭಾರತ ಗಣರಾಜ್ಯವಾದ ಬಳಿಕ 'ರಾಯಲ್' ಎಂಬ ಪದವನ್ನು ತೆಗೆದು ಹಾಕಲಾಯಿತು.
ಇದನ್ನೂ ಓದಿ: ಭಾರತದ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವ ಮಹತ್ವಾಕಾಂಕ್ಷಿ ಗುರಿಯ ಬೆನ್ನತ್ತಿದೆ ಇಸ್ರೋ
ಭಾರತೀಯ ವಾಯುಪಡೆ ಅಂದಿನಿಂದ ಹಲವು ಯುದ್ಧಗಳಲ್ಲಿ ಭಾಗಿಯಾಗಿದ್ದು, ಅದರಲ್ಲಿ ನಾಲ್ಕು ಯುದ್ಧಗಳು ಪಾಕಿಸ್ತಾನದ ವಿರುದ್ಧ ಮತ್ತು ಒಂದು ಯುದ್ಧ ಚೀನಾದ ವಿರುದ್ಧ ನಡೆದಿತ್ತು. ಭಾರತೀಯ ವಾಯುಪಡೆಯ ಮಹತ್ತರ ಕಾರ್ಯಾಚರಣೆಗಳಲ್ಲಿ ಆಪರೇಷನ್ ವಿಜಯ್ (1961ರಲ್ಲಿ ಗೋವಾ ವಿಮೋಚನಾ ಕದನ), ಆಪರೇಶನ್ ಮೇಘ್‌ದೂತ್ (1984ರಲ್ಲಿ ಸಿಯಾಚಿನ್ ನೀರ್ಗಲ್ಲು ಪ್ರದೇಶದ ವಶ), ಆಪರೇಶನ್ ಕ್ಯಾಕ್ಟಸ್ (ಮಾಲ್ಡೀವ್ಸ್ ನಲ್ಲಿ 1988ರಲ್ಲಿ ಮಧ್ಯಪ್ರವೇಶ), ಆಪರೇಶನ್ ಸಫೇದ್ ಸಾಗರ್ (1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿನ ವೈಮಾನಿಕ ಕಾರ್ಯಾಚರಣೆ), ಆಪರೇಶನ್ ಪರಾಕ್ರಮ್ (2001ರ ಸಂಸತ್ ಭವನ ದಾಳಿಯ ಮೇಲೆ ದಾಳಿಯ ಬಳಿಕ ವಾಯುಪಡೆಯ ಒಗ್ಗೂಡುವಿಕೆ), ಹಾಗೂ ಆಪರೇಶನ್ ರಾಹತ್ (2013ರ ಉತ್ತರಾಖಂಡದ ಪ್ರವಾಹದ ಬಳಿಕ ರಕ್ಷಣಾ ಕಾರ್ಯಾಚರಣೆ) ಪ್ರಮುಖವಾದವು. ಭಾರತೀಯ ವಾಯುಪಡೆ ಹಲವಾರು ದಂಗೆ ವಿರೋಧಿ ಮತ್ತು ಉಗ್ರ ನಿಗ್ರಹ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದೆ. ಇದರಲ್ಲಿ ಆಪರೇಶನ್ ಬ್ಲೂ ಸ್ಟಾರ್ (1984ರಲ್ಲಿ ಸ್ವರ್ಣ ಮಂದಿರದ ಮೇಲೆ ದಾಳಿ), ಆಪರೇಶನ್ ಸೂರ್ಯ ಹೋಪ್ (2014ರ ಜಮ್ಮು ಮತ್ತು ಕಾಶ್ಮೀರ ಪ್ರವಾಹದ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ), ಹಾಗೂ ಹಾಗೂ ಆಪರೇಶನ್ ಬಂದಾರ್ (2019ರ ಬಾಲಾಕೋಟ್ ಮೇಲಿನ ವೈಮಾನಿಕ ದಾಳಿ) ಪ್ರಮುಖವಾದವು.
ಭಾರತೀಯ ವಾಯುಪಡೆಯ ಧ್ಯೇಯವಾಕ್ಯ 'ನಭಸ್ಪೃಶಂ ದೀಪ್ತಂ' (ಟಚ್ ದ ಸ್ಕೈ ವಿದ್ ಗ್ಲೋರಿ) ಎಂಬುದಾಗಿದ್ದು, ಇದನ್ನು ಭಗವದ್ಗೀತೆಯ 11ನೇ ಅಧ್ಯಾಯದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಭಾರತೀಯ ವಾಯುಪಡೆಯ ಲಾಂಛನವೂ ವಿಶಿಷ್ಟವಾಗಿದ್ದು, ಹಾರದೊಡನಿರುವ ರೆಕ್ಕೆಯುಳ್ಳ ಖಡ್ಗವಾಗಿದೆ. ಭಾರತೀಯ ವಾಯುಪಡೆ ನಾಲ್ಕು ಕಮಾಂಡ್‌ಗಳನ್ನು ಹೊಂದಿದ್ದು, ಕ್ರಮವಾಗಿ ವೆಸ್ಟರ್ನ್ ಏರ್ ಕಮಾಂಡ್, ಈಸ್ಟರ್ನ್ ಏರ್ ಕಮಾಂಡ್, ಸೆಂಟ್ರಲ್ ಏರ್ ಕಮಾಂಡ್ ಹಾಗೂ ಸದರ್ನ್ ಏರ್ ಕಮಾಂಡ್‌ಗಳಾಗಿವೆ.
ಇದನ್ನೂ ಓದಿ: UPSC Success Story: ಕೇವಲ 4 ಗಂಟೆ ಅಧ್ಯಯನ ನಡೆಸಿ ಆಗಿದ್ದು UPSC ಟಾಪರ್!
ಭಾರತೀಯ ವಾಯುಪಡೆ ಎರಡು ಕಾರ್ಯಾಚರಣಾ ಕಮಾಂಡ್‌ಗಳನ್ನು ಹೊಂದಿದ್ದು, ಅವೆಂದರೆ ತರಬೇತಿ ಕಮಾಂಡ್ ಮತ್ತು ನಿರ್ವಹಣಾ ಕಮಾಂಡ್‌ಗಳಾಗಿವೆ. ಭಾರತೀಯ ವಾಯುಪಡೆ 1,40,000 ಸಿಬ್ಬಂದಿಗಳ ಬಲ ಹೊಂದಿದ್ದು, 1,700ಕ್ಕೂ ಹೆಚ್ಚು ವಿಮಾನಗಳನ್ನು ಕಾರ್ಯಾಚರಿಸುತ್ತದೆ. ಇದರಲ್ಲಿ ಯುದ್ಧ ವಿಮಾನಗಳು, ಬಾಂಬರ್‌ಗಳು, ಸಾಗಾಣಿಕಾ ವಿಮಾನಗಳು, ಹೆಲಿಕಾಪ್ಟರ್‌ಗಳು, ತರಬೇತಿ ವಿಮಾನಗಳು, ಹಾಗೂ ಮಾನವರಹಿತ ವೈಮಾನಿಕ ವಾಹನಗಳು ಸೇರಿವೆ. ಭಾರತೀಯ ವಾಯುಪಡೆ ಬಳಸುವ ವಿಮಾನಗಳಲ್ಲಿ, ಸುಖೋಯಿ ಸು-30ಎಂಕೆಐ, ಡಸಾಲ್ಟ್ ರಫೇಲ್, ಎಚ್ಎಎಲ್ ತೇಜಸ್, ಮಿರೇಜ್ 2000, ಜಗ್ವಾರ್, ಮಿಗ್-29, ಮಿಗ್-21 ಬೈಸನ್, ಸಿ-17 ಗ್ಲೋಬ್‌ಮಾಸ್ಟರ್ 3, ಸಿ-130ಜೆ ಹರ್ಕ್ಯುಲಿಸ್, ಐಎಲ್-76 ಕ್ಯಾಂಡಿಡ್, ಎಎನ್-32 ಕ್ಲೈನ್, ಚಿನೂಕ್, ಅಪಾಚೆ, ಎಂಐ-17 ವಿ5, ಎಂಐ-35 ಹಿಂಡ್, ಧ್ರುವ್ ಎಎಲ್ಎಚ್, ಚೇತಕ್, ಕಿರಣ್ ಎಂಕೆ 2, ಪಿಲಾಟಸ್ ಪಿಸಿ-7, ಎಂಕೆ 2, ಹಾಗೂ ಡಕೋಟಾ ಪ್ರಮುಖವಾಗಿವೆ.
ಅಕ್ಟೋಬರ್ 8, 2023ರಂದು ಭಾರತೀಯ ವಾಯುಪಡೆ ತನ್ನ 91ನೇ ವಾರ್ಷಿಕೋತ್ಸವವನ್ನು ಆವರಿಸುತ್ತಿದೆ. ಇತ್ತೀಚಿನ ಸಂಪ್ರದಾಯದಂತೆ, ಭಾರತೀಯ ವಾಯುಪಡೆಯ ದಿನಾಚರಣೆಯನ್ನು ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ಆಚರಿಸುತ್ತಿದೆ. ಈ ವರ್ಷದ ವಾಯುಪಡೆಯ ದಿನಾಚರಣೆಯಂದು ಪರೇಡ್ ಹಾಗೂ ವೈಮಾನಿಕ ಪ್ರದರ್ಶನಗಳು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನೆರವೇರಲಿವೆ.
ಇದನ್ನೂ ಓದಿ: ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಹಾದಿಯಲ್ಲಿ ಭಾರತದ ಮುಂದಿರುವ ಸವಾಲುಗಳು ಮತ್ತು ಅವಕಾಶಗಳು
ವಿಧ್ಯುಕ್ತ ವಾಯುಪಡೆಯ ಪರೇಡ್ ಬಾಮ್ರೌಲಿಯ ವಾಯು ನೆಲೆಯಲ್ಲಿ ನೆರವೇರಲಿದೆ. ಇನ್ನು ವೈಮಾನಿಕ ಪ್ರದರ್ಶನ ಪ್ರಯಾಗ್‌ರಾಜ್ ಬಳಿಯ ಆರ್ಡ್‌ನೆನ್ಸ್ ಡಿಪೋ ಫೋರ್ಟ್‌ನ ಸಂಗಮ್ ಪ್ರದೇಶದ ಬಳಿ ನೆರವೇರಲಿದೆ. ಅಲ್ಲಿನ ಸುಂದರ ಭೂಪ್ರದೇಶಗಳು ವೈಮಾನಿಕ ಪ್ರದರ್ಶನವನ್ನು ಇನ್ನಷ್ಟು ಚಂದಗಾಣಿಸಲಿವೆ.
ವಾಯುಪಡೆಯ ದಿನಾಚರಣೆ ಸಂಭ್ರಮ ಕಳೆದ ವಾರವೇ ಆರಂಭಗೊಂಡಿದ್ದು, ಮಧ್ಯಪ್ರದೇಶದ ಭೋಪಾಲ್ ಬಳಿಯ ಭೋಜ್‌ತಲ್ ಕೆರೆಯ ಬಳಿ ಸೆಪ್ಟೆಂಬರ್ 30ರಂದು ನೆರವೇರಿತು.
ಭಾರತೀಯ ವಾಯುಸೇನಾ ದಿನಾಚರಣೆ ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ದಿನವಾಗಿದ್ದು, ಭಾರತೀಯ ಆಕಾಶದಲ್ಲಿ ದೇಶ ಸೇವೆ ನಡೆಸುವ ಎಲ್ಲ ವೀರ ಯೋಧರಿಗೆ ಗೌರವ ಸಲ್ಲಿಸುವ ಅವಕಾಶ ಕಲ್ಪಿಸುತ್ತದೆ. ರಾಷ್ಟ್ರಕ್ಕಾಗಿ ಸರ್ವೋಚ್ಚ ತ್ಯಾಗ ನಡೆಸಿದ ವೀರರಿಗೆ ಗೌರವ ನಮನ ಸಲ್ಲಿಸಲು ಇದು ಸರಿಯಾದ ಅವಕಾಶವಾಗಿದೆ. ಅದರೊಡನೆ, ಭಾರತದ ಸಾರ್ವಭೌಮತೆಯನ್ನು ರಕ್ಷಿಸಲು ಭಾರತೀಯ ವಾಯುಪಡೆಯ ಶ್ರಮವನ್ನು ಗುರುತಿಸಿ, ಶ್ಲಾಘಿಸುವ ಸುದಿನ ವಾಯುಪಡೆಯ ದಿನವಾಗಿದೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.