ಐಎಎಫ್ನಿಂದ ಬಾಲಾಕೋಟ್ ವಾಯುದಾಳಿ ದೃಶ್ಯವಿರುವ ಪ್ರೋಮೋ ವೀಡಿಯೋ ರಿಲೀಸ್!
ಅಕ್ಟೋಬರ್ 8ರಂದು ವಾಯುಪಡೆ ದಿನ ಆಚರಣೆ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆ ಪ್ರಮೋಶನಲ್ ಫಿಲಂ ಸಿದ್ಧಪಡಿಸಲಾಗಿದೆ. ಇದರಲ್ಲಿ ಫೆಬ್ರವರಿ 26ರ ಬಾಲಕೋಟ್ ವಾಯುದಾಳಿಯ ಆಯ್ದ ಭಾಗಗಳನ್ನು ತೋರಿಸಲಾಗಿದ್ದು, ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವೀಡಿಯೋವನ್ನು ಬಿಡುಗಡೆ ಮಾಡಲಾಯಿತು.
ನವದೆಹಲಿ: ಫೆಬ್ರವರಿ 14ರಂದು ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಭಾರತೀಯ ಯೋಧರ ಹತ್ಯೆಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆಯು ಬಾಲಾಕೋಟ್ ನಲ್ಲಿ ನಡೆಸಿದ ವಾಯುದಾಳಿಯ ಸಾಕ್ಷಿ ಇರುವ ವೀಡಿಯೋವೊಂದನ್ನು ಭಾರತೀಯ ವಾಯುಪಡೆ ಮೊದಲ ಬಾರಿಗೆ ಬಹಿರಂಗಪಡಿಸಿದೆ.
ಅಕ್ಟೋಬರ್ 8ರಂದು ವಾಯುಪಡೆ ದಿನ ಆಚರಣೆ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆ ಪ್ರಮೋಶನಲ್ ಫಿಲಂ ಸಿದ್ಧಪಡಿಸಲಾಗಿದೆ. ಇದರಲ್ಲಿ ಫೆಬ್ರವರಿ 26ರ ಬಾಲಕೋಟ್ ವಾಯುದಾಳಿಯ ಆಯ್ದ ಭಾಗಗಳನ್ನು ತೋರಿಸಲಾಗಿದ್ದು, ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವೀಡಿಯೋವನ್ನು ಬಿಡುಗಡೆ ಮಾಡಲಾಯಿತು. ಇದು, ಆಪರೇಷನ್ ಬಾಲಕೋಟ್ ನಡೆಸಿದ ಜಂಬಾಜ್ ಬಹದ್ದೂರ್ ಅವರ ವಿಡಿಯೋ ತುಣುಕನ್ನು ಸಹ ಒಳಗೊಂಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ, ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭಡೋರಿಯಾ ಅವರು ಕಳೆದ ಒಂದು ವರ್ಷದಲ್ಲಿ ವಾಯುಪಡೆಯು ಅನೇಕ ಪ್ರಮುಖ ಸಾಧನೆಗಳನ್ನು ಮಾಡಿದೆ. ಇದರಲ್ಲಿ ಫೆಬ್ರವರಿ 26ರಂದು ಬಾಲಕೋಟ್‌ನಲ್ಲಿ ಭಯೋತ್ಪಾದಕ ಶಿಬಿರಗಳನ್ನು ಯಶಸ್ವಿಯಾಗಿ ಗುರಿಯಾಗಿಸಿ ಧ್ವಂಸಗೊಳಿಸಿದ್ದು ಮುಖ್ಯವಾದುದು. ಇದಾದ ಬಳಿಕ ಫೆಬ್ರವರಿ 27ರಂದು ಪಾಕಿಸ್ತಾನದೊಂದಿಗಿನ ವಾಯು ಯುದ್ಧದಲ್ಲಿ ಭಾರತೀಯ ವಾಯುಪಡೆಯು ಮಿಗ್ -21 ಅನ್ನು ಕಳೆದುಕೊಂಡಿತು. ನಂತರ ಪಾಕಿಸ್ತಾನದ ಎಫ್ -16 ಅನ್ನು ನಾಶಪಡಿಸಲಾಯಿತು ಎಂದು ಸಿಂಗ್ ವಿವರಿಸಿದರು.
ಫೆಬ್ರವರಿ 27 ರಂದು ಶ್ರೀನಗರದಲ್ಲಿ ಮಿ-17 ಹೆಲಿಕಾಪ್ಟರ್ ಅಪಘಾತದ ಬಳಿಕ ಈ ಪ್ರಕರಣದ ವಿಚಾರಣೆ ಪೂರ್ಣಗೊಂಡಿದೆ ಎಂದು ಹೇಳಿದ ವಾಯುಪಡೆಯ ಮುಖ್ಯಸ್ಥ ಸಿಂಗ್, ನಮ್ಮದೇ ಕ್ಷಿಪಣಿ ಹೆಲಿಕಾಪ್ಟರ್‌ಗೆ ಅಪ್ಪಳಿಸಿದ ಕಾರಣ ಅದು ನಮ್ಮ ತಪ್ಪು. ಇಬ್ಬರು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಭವಿಷ್ಯದಲ್ಲಿ ಅಂತಹ ತಪ್ಪು ಮತ್ತೆ ಸಂಭವಿಸುವುದಿಲ್ಲ ಎಂದು ಭರವಸೆ ನೀಡಿದರು.
ಇದೇ ವೇಳೆ, ಬಾಲಕೋಟ್‌ನಂತಹ ವಾಯುದಾಳಿಯು ಮರುಕಳಿಸುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಾಕ್ ಮತ್ತೊಮ್ಮೆ ಭಯೋತ್ಪಾದಕ ದಾಳಿ ನಡೆಸಿದ್ದೇ ಆದಲ್ಲಿ ಸರ್ಕಾರದ ನಿರ್ಧಾರಕ್ಕೆ ಅನುಗುಣವಾಗಿ ಪ್ರತಿಕ್ರಿಯೆ ನೀಡಲಾಗುವುದು ಎಂದು ಹೇಳಿದರು.