ನವದೆಹಲಿ: ಒಂದೆಡೆ ಇಡೀ ವಿಶ್ವ ಕೊರೊನಾ ಮಹಾಮಾರಿಯ ವಿರುದ್ಧ ತನ್ನ ಹೋರಾಟ ನಡೆಸುತ್ತಿದ್ದರೆ, ಪಾಕ್ ಮಾತ್ರ ತನ್ನ ಚಾಳಿಯನ್ನು ಬಿಡುತ್ತಲೇ ಇಲ್ಲ. ಕೆರನ್ ಸೆಕ್ಟರ್ ನಲ್ಲಿ ಯದ್ಧವಿರಾಮವನ್ನು ಮತ್ತೊಮ್ಮೆ ಉಲ್ಲಂಘಿಸಿರುವ ಪಾಕ್ ಭಾರತೀಯ ಸೇನೆಯ ಮೇಲೆ ದಾಳಿ ನಡೆಸಿದೆ. ಆದರೆ, ಭಾರತೀಯ ಸೇನೆ ಕೂಡ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. ಈ ಪ್ರತಿದಾಳಿಯಲ್ಲಿ ಭಾರತ ಪಾಕ್ ಸೇನೆಯ ತೋಪುಖಾನೆ , ಉಗ್ರವಾದಿಗಳ ಲಾಂಚಿಂಗ್ ಪ್ಯಾಡ್ ಸೇರಿದಂತೆ ಹಲವು ಅಡಗು ತಾಣಗಳನ್ನು ಗುರಿಯಾಗಿಸಿದೆ. ಮೂಲಗಳ ಮಾಹಿತಿ ಪ್ರಕಾರ ಭಾರತೀಯ ಸೇನೆಯ ಈ ದಾಳಿಯಲ್ಲಿ ಪಾಕ್ ಸೇನೆಗೆ ಭಾರಿ ಹಾನಿಯುಂಟಾಗಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಶುಕ್ರವಾರ ಕಾಶ್ಮೀರದ ಕುಪ್ವಾಡಾ ಪ್ರಾಂತ್ಯದಲ್ಲಿ ಭಾರಿ ತೋಪುಖಾನೆಯನ್ನು ಬಳಸಿರುವ ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆಯ ಬಳಿ ಇರುವ ಉಗ್ರರ ಹಲವು ಲಾಂಚಿಂಗ್ ಪ್ಯಾಡ್ ಗಳನ್ನು ಧ್ವಂಸಗೊಳಿಸಿದೆ. ಕಳೆದ ಭಾನುವಾರ ಈ ಪ್ರದೇಶದಲ್ಲಿ ಪಾಕ್ ಉಗ್ರರು ಮತ್ತು ಭಾರತೀಯ ಸೇನೆಯ ಮಧ್ಯೆ ಭಾರಿ ಗುಂಡಿನ ಕಾಳಗ ನಡೆದಿತ್ತು. ಈ ಕಾಳಗದಲ್ಲಿ ಐವರು ಉಗ್ರರನ್ನು ಮಟ್ಟಹಾಕಲಾಗಿತ್ತು. ಇನ್ನೊಂದೆಡೆ ಈ ದಾಳಿಯಲ್ಲಿ ಭಾರತೀಯ ಸೇನೆಯ ಪ್ಯಾರಾ ಸ್ಪೆಷಲ್ ಫೋರ್ಸಸ್ ನ ಐವರು ಜವಾನರು ಕೂಡ ಹುತಾತ್ಮರಾಗಿದ್ದರು. ಈ ಕುರಿತು ಹೇಳಿಕೆ ನೀಡಿರುವ ಭಾರತೀಯ ಸೇನೆ ಶುಕ್ರವಾರ ಕದನ ವಿರಾಮ ಉಲ್ಲಂಘಿಸಿದ ಪಾಕ್ ಸೇನೆ ಭಾರಿ ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ಭಾರತೀಯ ಸೇನೆ ಕೂಡ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಹೇಳಿದೆ.


ಈ ವೇಳೆ ಭಾರತೀಯ ಸೇನೆ 105 mm ಫೀಲ್ಡ್ ಗನ್ ಜೊತೆಗೆ 155 mmನ ಬೊಫೋರ್ಸ್ ತೋಪನ್ನು ಬಳಸಿ LoC ಬಳಿ ನಿರ್ಮಿಸಲಾಗಿರುವ ಪಾಕ್ ತೋಪುಖಾನೆ ಹಾಗೂ ಅದರ ಅಕ್ಕಪಕ್ಕದಲ್ಲಿರುವ ಉಗ್ರವಾದಿಗಳ ಲಾಂಖಿಂಗ್ ಪ್ಯಾಡ್ ಗಳ ಮೇಲೆ ಭಾರಿ ಪ್ರಮಾಣದ ದಾಳಿ ನಡೆಸಿದ್ದು, ಇಂದೂ ಕೂಡ ಈ ದಾಳಿ ಮುಂದುವರೆದಿತ್ತು ಎನ್ನಲಾಗಿದೆ.


ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಸೇನೆಯ ಮೂಲಗಳು ಲಾಂಚಿಂಗ್ ಪ್ಯಾಡ್ ಗಳನ್ನು ಹೊರತುಪಡಿಸಿ ಮದ್ದು-ಗುಂಡುಗಳ ಸಂಗ್ರಹಾರಗಳನ್ನು ಸಹ ಗುರಿಯಾಗಿಸಿ ಧ್ವಂಸಗೊಳಿಸಲಾಗಿದೆ ಎಂದಿವೆ. ಆದರೆ, ಈ ದಾಳಿಯಲ್ಲಿ ಭಾರತೀಯ ಸೇನೆಗೆ ಯಾವ ರೀತಿಯ ಹಾನಿಯಾಗಿದೆ ಎಂಬುದರ ಕುರಿತು ಯಾವುದೇ ವರದಿಗಳು ಬಂದಿಲ್ಲ. ಒಂದೆಡೆ ಇಡೀ ವಿಶ್ವ ಕೊರೊನಾ ವೈರಸ್ ವಿರುದ್ಧ ಯಾವ ರೀತಿ ಹೋರಾಟ ನಡೆಸಬೇಕು ಎಂಬುದರ ಕುರಿತು ಆಲೋಚಿಸುತ್ತಿದ್ದರೆ, ಪಾಕಿಸ್ತಾನ ಮಾತ್ರ ಈ ಅವಕಾಶವನ್ನು ಬಳಸಿ ಕಾಶ್ಮೀರದಲ್ಲಿ ಹೊಸದಾಗಿ  ಭಯೋತ್ಪಾದನೆಯನ್ನು ಹುಟ್ಟುಹಾಕಲು ಸಂಚು ರೂಪಿಸುವುದರಲ್ಲಿ ತೊಡಗಿದೆ. ಈ ಕುರಿತು ಹೇಳಿಕೆ ನೀಡಿರುವ ಭಾರತೀಯ ಸೇನೆಯ ಹಿರಿಯ ಅಧಿಕಾರಿಯೊಬ್ಬರು ಮುಂಬರುವ ದಿನಗಳಲ್ಲಿ ಪಾಕ್ ವತಿಯಿಂದ ಹೆಚ್ಚಿನ ಪ್ರಮಾದದ ಗುಂಡಿನ ದಾಳಿ ಹಾಗೂ ಒಳನುಸುಳುವಿಕೆ ಸಂಭವಿಸುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.