ಅತ್ಯಾಧುನಿಕ ಯುದ್ಧಕ್ಕೆ ಭಾರತೀಯ ಸೇನೆಯ ಸಿದ್ಧತೆ
ಆಧುನಿಕ ಕಾಲದ ಯುದ್ಧಕ್ಕೆ ಸನ್ನದ್ಧವಾಗುತ್ತಿರುವ ಭಾರತೀಯ ಸೇನೆ 2020 ರಲ್ಲಿ 13 ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ಸ್ ಗಳನ್ನು ನಿಯೋಜಿಸಲಿದೆ. ಇವುಗಳಲ್ಲಿ 4 ಪಾಕಿಸ್ತಾನದ ಗಡಿಯಲ್ಲಿ ನಿಯೋಜನೆ ಗೊಳ್ಳುತ್ತಿದ್ದರೆ, 9 ಚೀನಾ ಗಡಿಯಲ್ಲಿ ನಿಯೋಜನೆಗೊಳ್ಳಲಿವೆ.
ನವದೆಹಲಿ: ತನ್ನ ಹೊಸ ಯುದ್ಧನೀತಿಯ ಭಾಗವಾಗಿ ಭಾರತೀಯ ಸೇನೆ ದೊಡ್ಡ ಫಾರ್ಮೇಶನ್ ಗಳ ಬದಲಾಗಿ ಸಣ್ಣ ಸಣ್ಣ ಫಾರ್ಮೇಶನ್ ಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಿದೆ. ಅಂದರೆ, 2020 ಸಾಲಿನ ಅಂತ್ಯದವರೆಗೆ ಭಾರತೀಯ ಸೇನೆ 13 IBG ಅಂದರೆ ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ಸ್ ಗಳ ನಿಯೋಜನೆ ಮಾಡಲಿದೆ. ಇವುಗಳಲ್ಲಿ 4 ತುಕಡಿಗಳು ಪಾಕ್ ಗಡಿಭಾಗದಲ್ಲಿ ನಿಯೋಜನೆಗೊಳ್ಳುತ್ತಿದ್ದರೆ, 9 ತುಕಡಿಗಳು ಚೀನಾ ಗಡಿಯಲ್ಲಿ ನಿಯೋಜನೆಗೊಳ್ಳಲಿವೆ. ಸೇನೆಯ ಯಾವುದೇ ಒಂದು ಡಿವಿಜನ್ ಗಿಂತ ಗಾತ್ರದಲ್ಲಿ ಚಿಕ್ಕದಾಗಿರುವ IBGಗಳು ಬಟಾಲಿಯನ್ ಗಿಂತ ಗಾತ್ರದಲ್ಲಿ ದೊಡ್ಡದಾಗಿರಲಿವೆ. ಈ ಇಂಟಿಗ್ರೇಟೆಡ್ ಗ್ರೂಪ್ಸ್ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಭಾರತೀಯ ಸೇನೆಯನ್ನು ಮರುಸಂಘಟಿಸುವ ಯೋಜನೆಯ ಭಾಗ ಎನ್ನಲಾಗಿದೆ.
ಇನ್ಮುಂದೆ ಯುದ್ಧಗಳು ಅತ್ಯಂತ ತೀಕ್ಷ್ಣಗತಿಯಲ್ಲಿ ಮತ್ತು ನಿಶ್ಚಿತ ಗುರಿಯನ್ನು ತಲುಪುವ ಉದ್ದೇಶದಿಂದ ನಡೆಯಲಿವೆ ಎನ್ನಲಾಗಿದೆ. ಈ ಯುದ್ಧಗಳು ಕಡಿಮೆ ಅವಧಿಯದ್ದಾಗಿದ್ದು, ಅಂತಾರಾಷ್ಟ್ರೀಯ ಒತ್ತಡ ಈ ಯುದ್ಧಗಳನ್ನು ಹೆಚ್ಚಿನ ಸಮಯದವರೆಗೆ ನಡೆಯಲು ಬಿಡುವುದಿಲ್ಲ ಎಂದೇ ಹೇಳಲಾಗುತ್ತದೆ. ಸದ್ಯ ಭಾರತೀಯ ಸೇನೆ ಕೋರ್, ಡಿವಿಜನ್ ಹಾಗೂ ಬ್ರಿಗೆಡ್ ಗಳಲ್ಲಿ ವಿಂಗಡಣೆಯಾಗಿದೆ.
ಬ್ರಿಗೆಡ್ ನಲ್ಲಿ ಮೂರು ಬಟಾಲಿಯನ್, ಡಿವಿಜನ್ ನಲ್ಲಿ ಮೂರು ಬ್ರಿಗೆಡ್ ಹಾಗೂ ಕೋರ್ ನಲ್ಲಿ ಸಾಮಾನ್ಯವಾಗಿ ಮೂರು ಡಿವಿಜನ್ ಗಳಿರುತ್ತವೆ. "ಶತ್ರುಗಳ ಸರಹದ್ದಿನಲ್ಲಿ ಅತ್ಯಂತ ಒಳ ನುಸುಳಲು ಕೋರ್ ನ ಅಗತ್ಯತೆ ಇರುತ್ತದೆ. ಆದರೆ, ಹೆಚ್ಚು ಒಳನುಗ್ಗುವ ಬದಲು ಕಡಿಮೆ ಒಳನುಗ್ಗಿ ಹೆಚ್ಚಿನ ಪ್ರದೇಶವನ್ನು ಆಕ್ರಮಿಸುವುದು ಎಂದಿಗೂ ಉತ್ತಮ. ಇದಕ್ಕಾಗಿ ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ ಗಳಂತಹ ಫಾರ್ಮೇಶನ್ ಹೆಚ್ಚು ಪರಣಾಮಕಾರಿಯಾಗಿವೆ" ಎಂದು ಸೇನೆಯ ಹಿರಿಯ ಅಧಿಕಾರಿಗಳೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರತ್ಯೇಕ ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ಸ್ ನಲ್ಲಿ ನಾಲ್ಕರಿಂದ ಆರು ಇನ್ಫೆಂಟ್ರಿ ಬಟಾಲಿಯನ್ ಗಳಿರಲಿವೆ ಹಾಗೂ ಅಗತ್ಯತೆಗೆ ಅನುಸಾರವಾಗಿ ಇಂಜಿನೀರ್ಸ್, ಆರ್ಟಿಲರಿ ಹಾಗೂ ಸಿಗ್ನಲ್ ನೀಡುವ ತಂಡಗಳು ಇರಲಿವೆ. ಪಶ್ಚಿಮದ ಗಡಿಯಲ್ಲಿ ಜಮ್ಮುವಿನಲ್ಲಿ ಈಗಾಗಲೇ ಎರಡು IBG ನಿರ್ಮಾಣಗೊಂಡಿವೆ. ಸದ್ಯ ಒಂದು IBG ನಿರ್ಮಾಣ ಹಂತದಲ್ಲಿದ್ದು, ಅದನ್ನು ಪಂಜಾಬ್ ನಲ್ಲಿ ನಿಯೋಜಿಸಲಾಗುತ್ತಿದೆ. 5 IBG ಗಳನ್ನು ಚೀನಾಗೆ ಹೊಂದಿಕೊಂಡಂತೆ ಇರುವ ಸಿಕ್ಕಿಂ ಗಡಿಭಾಗದಲ್ಲಿ ನಿಯೋಜಿಸಲು ಉದ್ದೇಶಿಸಲಾಗಿದೆ. ನಾಲ್ಕು IBG ಗಳನ್ನು ಪೂರ್ವೋತ್ತರ ಭಾಗದಲ್ಲಿ ಮತ್ತು ಚೀನಾಗೆ ಹೊಂದಿಕೊಂಡಂತೆ ಇರುವ ಎರಡನೆಯ ಗಡಿಯಲ್ಲಿ ನಿಯೋಜಿಸಲಾಗುತ್ತಿದೆ.