ಹೆಲಿಕಾಪ್ಟರ್ ರೆಕ್ಕೆಗೆ ಸಿಲುಕಿ ಮಾನಸ ಸರೋವರ ಯಾತ್ರಾರ್ಥಿಯ ಸಾವು!
ಮೃತ ವ್ಯಕ್ತಿಯನ್ನು ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಮುಂಬೈ ಮೂಲದ ನಾಗೇಂದ್ರ ಕುಮಾರ್ ಕಾರ್ತಿಕ್ ಮೆಹ್ತಾ ಎಂದು ಗುರುತಿಸಲಾಗಿದೆ.
ಕಠ್ಮಂಡು: ಕೈಲಾಸ-ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಭಾರತ ಮೂಲದ ಯಾತಾರ್ಥಿಯೊಬ್ಬರ ತಲೆ ಹೆಲಿಕಾಪ್ಟರ್ ರೆಕ್ಕೆಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನೇಪಾಳದ ಹಿಲ್ಸಾ ಪ್ರದೇಶದ ಗುಡ್ಡಗಾಡು ಹೆಲಿಪ್ಯಾಡ್ ಒಂದರಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಮುಂಬೈ ಮೂಲದ ನಾಗೇಂದ್ರ ಕುಮಾರ್ ಕಾರ್ತಿಕ್ ಮೆಹ್ತಾ ಎಂದು ಗುರುತಿಸಲಾಗಿದೆ. ಹೆಲಿಕಾಪ್ಟರ್ ಎಂಜಿನ್ ಚಾಲನೆಯಲ್ಲಿರುವಾಗಲೇ ಯಾತ್ರಾರ್ಥಿಗಳನ್ನು ಇಳಿಸಲಾಗಿದೆ. ಈ ವೇಳೆ ಭಾರತ ಮೂಲದ 42 ವರ್ಷದ ನಾಗೇಂದ್ರ ಕುಮಾರ್ ಕಾರ್ತಿಕ್ ಮೆಹ್ತಾ ಎಂಬುವವರು ಬಗ್ಗಿಕೊಂಡು ಬರದೇ ನೇರವಾಗಿ ನಿಂತ ಕೂಡಲೇ ಹೆಲಿಕಾಪ್ಟರ್ ನ ರೆಕ್ಕೆ ಅವರ ತಲೆ ಸೀಳಿರುವ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ದೇಹವನ್ನು ಸಿಮಿಕೋಟ್ ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನೇಪಾಳದ ಸಿಮಿಕೋಟ್ ಹಾಗೂ ಹಿಲ್ಸಾ ಪ್ರದೇಶಕ್ಕೆ ಪುಟ್ಟ ವಿಮಾನಗಳು ಅಥವಾ ಹೆಲಿಕಾಪ್ಟರ್ ಮೂಲಕ ಮಾತ್ರ ಸಂಪರ್ಕ ಸಾಧಿಸಲು ಅವಕಾಶವಿದೆ.