ಕ್ಯಾರ್ ಚಂಡಮಾರುತ: ಮುಂಬೈನ ಪಶ್ಚಿಮ ಕರಾವಳಿಯಲ್ಲಿ 17 ಮೀನುಗಾರರ ರಕ್ಷಣೆ
ಮುಂಬೈನ ಪಶ್ಚಿಮ ಕರಾವಳಿಯಲ್ಲಿ ಕ್ಯಾರ್ ಚಂಡಮಾರುತ ತೀವ್ರಗೊಂಡಿದ್ದರಿಂದಾಗಿ ಸಮುದ್ರದಲ್ಲಿ ಸಿಲುಕಿದ್ದ 17 ಮೀನುಗಾರರನ್ನು ಭಾರತೀಯ ನೌಕಾಪಡೆ ಶನಿವಾರ ರಕ್ಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವದೆಹಲಿ: ಮುಂಬೈನ ಪಶ್ಚಿಮ ಕರಾವಳಿಯಲ್ಲಿ ಕ್ಯಾರ್ ಚಂಡಮಾರುತ ತೀವ್ರಗೊಂಡಿದ್ದರಿಂದಾಗಿ ಸಮುದ್ರದಲ್ಲಿ ಸಿಲುಕಿದ್ದ 17 ಮೀನುಗಾರರನ್ನು ಭಾರತೀಯ ನೌಕಾಪಡೆ ಶನಿವಾರ ರಕ್ಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಐಎನ್ಎಸ್ ತೆಗ್ ಮುಂಬೈ ಹೈದಿಂದ ವೈಷ್ಣೋ ದೇವಿ ಮಾತಾ ಎಂಬ ಮುಳುಗುತ್ತಿರುವ ಮೀನುಗಾರಿಕಾ ದೋಣಿಯಿಂದ 17 ಮೀನುಗಾರರನ್ನು ರಕ್ಷಿಸಿದೆ' ಎಂದು ನೌಕಾಪಡೆ ಟ್ವೀಟ್ ಮಾಡಿದೆ.ನೌಕಾಪಡೆಯ ಹಡಗು ಮೀನುಗಾರಿಕಾ ದೋಣಿ ರಕ್ಷಣೆಗೆ ಅನೇಕ ಪ್ರಯತ್ನ ಮಾಡಿತು. ಆದರೆ 17 ಮೀನುಗಾರರನ್ನು ರಕ್ಷಿಸಿದ ನಂತರ ಅವರ ಹಡುಗು ಮುಳುಗಿದೆ. ಈಗ ರಕ್ಷಿಸಿದ ಮೀನುಗಾರರಿಗೆ ಯಾವುದೇ ಗಾಯಗಳಾಗಿಲ್ಲ ಮತ್ತು ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ಯಾರ್ ಚಂಡಮಾರುತ ಒಮನ್ ಕರಾವಳಿಯ ಕಡೆಗೆ ಗಂಟೆಗೆ 14 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ಶನಿವಾರ ತಿಳಿಸಿತ್ತು. ಗೋವಾದಲ್ಲಿ ರಕ್ಷಕರು ಸ್ಟ್ಯಾಂಡ್‌ಬೈನಲ್ಲಿದ್ದರು ಮತ್ತು ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್‌ನ ಕೆಲವು ಭಾಗಗಳಿಗೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಕ್ಯಾರ್ ಚಂಡಮಾರುತದ ಹಿನ್ನಲೆಯಲ್ಲಿ ಶನಿವಾರದಂದು ಭಾರತೀಯ ಕೋಸ್ಟ್ ಗಾರ್ಡ್ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಿತ್ತು. ಸಮುದ್ರದಲ್ಲಿ ಸಿಕ್ಕಿಬಿದ್ದ ಮೀನುಗಾರಿಕೆ ದೋಣಿಗಳನ್ನು ಪತ್ತೆ ಮಾಡಲು ಕೋಸ್ಟ್ ಗಾರ್ಡ್ 10 ಹಡಗುಗಳು, ನಾಲ್ಕು ಡಾರ್ನಿಯರ್ ವಿಮಾನಗಳು ಮತ್ತು ಎರಡು ಹೆಲಿಕಾಪ್ಟರ್ಗಳನ್ನು ನಿಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.