ಆಂಧ್ರಪ್ರದೇಶದ ಸೂರ್ಯಲಂಕಾ ವಾಯುನೆಲೆಯಲ್ಲಿ ಆಯೋಜಿಸಲಾದ ಅಸ್ತ್ರಶಕ್ತಿ 2023 ಅಭ್ಯಾಸದಲ್ಲಿ ಭಾರತದ ಸ್ವದೇಶೀ ನಿರ್ಮಾಣದ ಆಕಾಶ್ ಕ್ಷಿಪಣಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತು.


COMMERCIAL BREAK
SCROLL TO CONTINUE READING

ಭಾರತೀಯ ವಾಯುಪಡೆ (ಐಎಎಫ್) ಡಿಸೆಂಬರ್‌ 12ರಂದು ಆಯೋಜಿಸಿದ ಅಸ್ತ್ರಶಕ್ತಿ ಅಭ್ಯಾಸದಲ್ಲಿ ಒಂದು ಆಕಾಶ್ ಕ್ಷಿಪಣಿ ವ್ಯವಸ್ಥೆ ಏಕಕಾಲದಲ್ಲಿ ನಾಲ್ಕು ಮಾನವರಹಿತ ವೈಮಾನಿಕ ಗುರಿಗಳ ಮೇಲೆ ದಾಳಿ ನಡೆಸಿತು.


ಕೇವಲ ಒಂದು ಕ್ಷಿಪಣಿಯನ್ನು ಉಡಾವಣೆಗೊಳಿಸುವ ಮೂಲಕ, ಒಟ್ಟು ನಾಲ್ಕು ಗುರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸುವ ಮಹತ್ವದ ಸಾಧನೆಯನ್ನು ಭಾರತ ಪ್ರದರ್ಶಿಸಿದೆ. ಕಮಾಂಡ್ ಮಾರ್ಗದರ್ಶನದಲ್ಲಿ ಬಹುತೇಕ 30 ಕಿಲೋಮೀಟರ್‌ಗಳ ವ್ಯಾಪ್ತಿಯಲ್ಲಿ ಈ ವೈಮಾನಿಕ ಗುರಿಗಳ ಮೇಲೆ ದಾಳಿ ನಡೆಸಲಾಗಿದೆ.


ಈ ಅಭ್ಯಾಸದ ಸಂದರ್ಭದಲ್ಲಿ, ನಾಲ್ಕು ಗುರಿಗಳು ಪರಸ್ಪರ ಜೊತೆಯಾಗಿ, ಅಥವಾ ಅತ್ಯಂತ ಸನಿಹದಲ್ಲಿದ್ದುಕೊಂಡು ಒಂದೇ ದಿಕ್ಕಿನಿಂದ ಸಾಗಿ ಬಂದವು. ಬಳಿಕ ಏಕಕಾಲದಲ್ಲಿ ವಿವಿಧ ದಿಕ್ಕುಗಳಿಂದ ದಾಳಿ ನಡೆಸಲು ಅವುಗಳು ಪರಸ್ಪರ ದೂರಾದವು.


ಆಕಾಶ್ ಕ್ಷಿಪಣಿ ವ್ಯವಸ್ಥೆ ಒಂದು ಫೈರಿಂಗ್ ಲೆವೆಲ್ ರೇಡಾರ್ (ಎಫ್ಎಲ್ಆರ್), ಒಂದು ಫೈರಿಂಗ್ ಕಂಟ್ರೋಲ್ ಸೆಂಟರ್ (ಎಫ್‌ಸಿಸಿ), ಹಾಗೂ ಎರಡು ಆಕಾಶ್ ಏರ್ ಫೋರ್ಸ್ ಲಾಂಚರ್‌ಗಳನ್ನು (ಎಎಎಫ್ಎಲ್) ಹೊಂದಿದೆ. ಪ್ರತಿಯೊಂದು ಲಾಂಚರ್ ತಲಾ ಐದು ಕ್ಷಿಪಣಿಗಳನ್ನು ಹೊಂದಿರುತ್ತದೆ.


ಎಫ್ಎಲ್ಆರ್ ವಾಯುದಾಳಿಯ ಸಂಭಾವ್ಯತೆಯನ್ನು ಗುರುತಿಸಿ, ತನ್ನ ಗುರಿಯನ್ನು ನಿಖರವಾಗಿ ಗಮನಿಸಿತು. ಅದು ಇಂಟಗ್ರೇಟೆಡ್ ಏರ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸಿಸ್ಟಮ್ (ಐಎಸಿಸಿಎಸ್) ಹಂತದ ಮೇಲಧಿಕಾರಿಗಳಿಗೆ ನಾಲ್ಕು ಗುರಿಗಳ ಮಾಹಿತಿಯನ್ನು ರವಾನಿಸಿತು.


ಅದಾದ ಬಳಿಕ, ಆಕಾಶ್ ಫೈರಿಂಗ್ ಯುನಿಟ್‌ಗೆ ಈ ಅಪಾಯವನ್ನು ನಿವಾರಿಸುವ ಗುರಿ ನೀಡಲಾಯಿತು. ಅದಾದ ಬಳಿಕ ಫೈರಿಂಗ್ ಲಾಂಚರ್‌ಗಳನ್ನು ನಿಯೋಜಿಸಿತು. ಫೈರಿಂಗ್ ಕಂಟ್ರೋಲ್ ಸೆಂಟರ್ ಉಸ್ತುವಾರಿ ಕ್ಷಿಪಣಿ ವ್ಯವಸ್ಥೆ ಸನ್ನದ್ಧವಾಗಿದೆ ಎಂದು ಸಂಕೇತ ಬಂದ ತಕ್ಷಣವೇ ಉಡಾವಣೆಗೊಳಿಸಲು ಆದೇಶ ನೀಡಿದರು. ಎರಡು ಲಾಂಚರ್‌ಗಳಿಂದ ಎರಡು ಕ್ಷಿಪಣಿಗಳನ್ನು ಉಡಾವಣೆಗೊಳಿಸಲಾಯಿತು. ಮುಂದಿನ ಎರಡು ಗುರಿಗಳಿಗೂ ಅವೇ ಲಾಂಚರ್‌ಗಳನ್ನು ಬಳಸಲಾಯಿತು.


ಅತ್ಯಂತ ಕಡಿಮೆ ಸಮಯದಲ್ಲಿ, ನಾಲ್ಕು ಕ್ಷಿಪಣಿಗಳನ್ನು ಉಡಾವಣೆಗೊಳಿಸಲಾಯಿತು. ಎಫ್ಎಲ್ಆರ್ ಯಶಸ್ವಿಯಾಗಿ ಅವೆಲ್ಲ ಕ್ಷಿಪಣಿಗಳನ್ನೂ ಅವುಗಳ ಉದ್ದೇಶಿತ ಗುರಿಯೆಡೆಗೆ ನಿರ್ದೇಶಿಸಿತು. ಬಹುತೇಕ 30 ಕಿಲೋಮೀಟರ್‌ಗಳಷ್ಟು ದೂರದಲ್ಲಿದ್ದ ಗುರಿಗಳನ್ನು ಏಕಕಾಲದಲ್ಲಿ ಯಶಸ್ವಿಯಾಗಿ ಹೊಡೆದುರುಳಿಸಲಾಯಿತು.


ಆಕಾಶ್ ಕ್ಷಿಪಣಿ ವ್ಯವಸ್ಥೆ ಒಂದು ಅತ್ಯಾಧುನಿಕ ತಂತ್ರಜ್ಞಾನದ, ಭೂಮಿಯಿಂದ ಗಾಳಿಗೆ ದಾಳಿ ನಡೆಸುವ (ಸರ್ಫೇಸ್ ಟು ಏರ್ - ಎಸ್ಎಎಂ) ಭಾರತೀಯ ನಿರ್ಮಾಣದ ಆಯುಧ ವ್ಯವಸ್ಥೆಯಾಗಿದ್ದು, ಬಹುತೇಕ ಹತ್ತು ವರ್ಷಗಳಿಂದ ಭಾರತೀಯ ಸೇನಾಪಡೆಗಳ ಬಳಕೆಯಲ್ಲಿದೆ. ಆಕಾಶ್ ಭಾರತದ ಆಗಸವನ್ನು ಸುರಕ್ಷಿತವಾಗಿಡಲು, ರಾಷ್ಟ್ರೀಯ ಭದ್ರತೆಯನ್ನು ಖಾತ್ರಿಪಡಿಸಲು ಮಹತ್ವದ ಕ್ಷಿಪಣಿ ವ್ಯವಸ್ಥೆಯಾಗಿದೆ.


ಆಕಾಶ್ ಕ್ಷಿಪಣಿ ವ್ಯವಸ್ಥೆಯನ್ನು ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಗಳು 30,000 ಕೋಟಿ ರೂಪಾಯಿಗಳ ಮೊತ್ತಕ್ಕೆ ಖರೀದಿಸಿದ್ದು, ದೇಶೀಯ ಕ್ಷಿಪಣಿ ವ್ಯವಸ್ಥೆಯ ಇತಿಹಾಸದಲ್ಲಿ ಅತಿದೊಡ್ಡ ಖರೀದಿ ಆದೇಶಗಳಲ್ಲಿ ಒಂದಾಗಿದೆ.


ಈ ಕ್ಷಿಪಣಿಗಳನ್ನು ಭಾರತ್ ಡೈನಾಮಿಕ್ಸ್ ಲಿಮಿಟೆಡ್, ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್, ಲಾರ್ಸನ್ ಆ್ಯಂಡ್ ಟ್ಯೂಬ್ರೊ, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್, ಇಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್, ಮತ್ತು ಬಿಇಎಂಎಲ್ ಲಿಮಿಟೆಡ್ ಸಂಸ್ಥೆಗಳು ನಿರ್ಮಿಸಿದ್ದು, ಇದರಲ್ಲಿ ಇತರ ಸಣ್ಣ ಉದ್ಯಮಗಳು ಮತ್ತು ಔದ್ಯಮಿಕ ಸಹಯೋಗಿಗಳು ಭಾಗಿಯಾಗಿದ್ದಾರೆ.


-ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.