ಐಸಿಜೆ ನ್ಯಾಯಾಧೀಶರಾಗಿ ಭಾರತದ ದಲ್ವೀರ್ ಭಂಡಾರಿ ಪುನರಾಯ್ಕೆ
ವಿಶ್ವ ಸಂಸ್ಥೆ : ಅಂತರ ರಾಷ್ಟ್ರೀಯ ನ್ಯಾಯಾಲಯ(ಐಸಿಜೆ) ನ್ಯಾಯಾಧೀಶರಾಗಿ ದಲ್ವೀರ್ ಭಂಡಾರಿ ಪುನರಾಯ್ಕೆ ಆಗುವ ಮೂಲಕ ಭಾರತಕ್ಕೆ ವಿಶ್ವ ಮಟ್ಟದಲ್ಲಿ ದೊಡ್ಡ ಜಯ ಸಿಕ್ಕಂತಾಗಿದೆ.
ಕೊನೆ ಕ್ಷಣದಲ್ಲಿ ಬ್ರಿಟನ್ ಅಭ್ಯರ್ಥಿ ಕ್ರಿಸ್ಟೋಫರ್ ಗ್ರೀನ್ ವುಡ್ ನಾಮಪತ್ರ ಹಿಂತೆಗೆದುಕೊಂಡ ಕಾರಣ ದಲ್ವೀರ್ ಭಂಡಾರಿ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದಾರೆ.
ನ್ಯೂಯಾರ್ಕ್‍ನಲ್ಲಿರುವ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಭಂಡಾರಿ ಅವರಿಗೆ ಸಾಮಾನ್ಯ ಸಭೆಯಲ್ಲಿ 193 ಮತಗಳ ಪೈಕಿ 183 ಮತಗಳು ಬಿದ್ದಿದ್ದರೆ, ಭದ್ರತಾ ಮಂಡಳಿಯಲ್ಲಿ ಎಲ್ಲ 15 ಮತಗಳೂ ಭಂಡಾರಿ ಪರ ಚಲಾವಣೆಯಾಗಿವೆ.
ನ್ಯೂಯಾರ್ಕ್‍ನಲ್ಲಿರುವ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಭಂಡಾರಿ ಅವರಿಗೆ ಸಾಮಾನ್ಯ ಸಭೆಯಲ್ಲಿ 193 ಮತಗಳ ಪೈಕಿ 183 ಮತಗಳು ಬಿದ್ದಿದ್ದರೆ, ಭದ್ರತಾ ಮಂಡಳಿಯಲ್ಲಿ ಎಲ್ಲ 15 ಮತಗಳೂ ಭಂಡಾರಿ ಪರ ಚಲಾವಣೆಯಾಗಿವೆ.
ಐಸಿಜೆಯಲ್ಲಿ ತೆರವಾಗಿದ್ದ 5 ಸ್ಥಾನಗಳಿಗೆ ಈ ಹಿಂದೆ 4 ನ್ಯಾಯಮೂರ್ತಿಗಳ ಆಯ್ಕೆ ನಡೆದಿದ್ದು, ಬಾಕಿ ಇದ್ದ ಒಂದು ಸ್ಥಾನಕ್ಕಾಗಿ ದಲ್ವೀರ್ ಭಂಡಾರಿ ಹಾಗೂ ಬ್ರಿಟನ್‍ನ ಕ್ರಿಸ್ಟೋಫರ್ ಗ್ರೀನ್‍ವುಡ್ ಕಣದಲ್ಲಿದ್ದರು. ಈಗ ದಲ್ವೀರ್ ಭಂಡಾರಿ ಆಯ್ಕೆಯಾಗುವ ಮೂಲಕ 1945ರಲ್ಲಿ ಅಸ್ತಿತ್ವಕ್ಕೆ ಬಂದ ಐಸಿಜೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬ್ರಿಟನ್ ನ್ಯಾಯಾಧೀಶರಿಗೆ ಸ್ಥಾನವಿಲ್ಲದಾಗಿದೆ.
ಕಳೆದ 71 ವರ್ಷಗಳ ಇತಿಹಾಸದಲ್ಲೇ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಬ್ರಿಟನ್‌ನ ನ್ಯಾಯಮೂರ್ತಿ ಇಲ್ಲದಿರುವುದು ಇದೇ ಮೊದಲು ಎನ್ನಲಾಗಿದೆ.
1947 ಅಕ್ಟೋಬರ್ 1 ರಂದು ರಾಜಸ್ಥಾನದಲ್ಲಿ ಜನಿಸಿದ್ದ ದಲ್ವೀರ್ ಭಂಡಾರಿ ಈ ಹಿಂದೆ ದೆಹಲಿ ಹೈಕೋರ್ಟ್, ಬಾಂಬೆ ಹೈಕೋರ್ಟ್ ಬಳಿಕ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದರು. 2005 ಅಕ್ಟೋಬರ್ 28 ರಿಂದ 2012 ಏಪ್ರಿಲ್ 27ರವರೆಗೆ ಸುಪ್ರೀಂ ಕೋರ್ಟ್ ಜಡ್ಜ್ ಆಗಿ ನಿವೃತ್ತರಾದ ಬಳಿಕ 2012 ಏಪ್ರಿಲ್ ನಲ್ಲಿ ಐಸಿಜೆಗೆ ಆಯ್ಕೆಯಾಗಿದ್ದರು.
ದಲ್ವೀರ್ ಭಂಡಾರಿ ಅವರ ಪುನರಾಯ್ಕೆಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ``ವಂದೇ ಮಾತರಂ. ಭಾರತ ಐಸಿಜೆ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಜೈ ಹಿಂದ್'' ಎಂದು ಟ್ವೀಟ್ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ದಲ್ವೀರ್ ಭಂಡಾರಿ ಅವರನ್ನು ಅಭಿನಂದಿಸಿದ್ದಾರೆ.