ಭಾರತದಲ್ಲಿ ಅನೇಕ ಭಾಷೆಗಳಿರುವುದು ಅದರ ದೌರ್ಬಲ್ಯವಲ್ಲ- ರಾಹುಲ್ ಗಾಂಧಿ
ದೇಶಾದ್ಯಂತ ಹಿಂದಿಯನ್ನು ಸಾಮಾನ್ಯ ಭಾಷೆಯನ್ನಾಗಿ ಹೊಂದಬೇಕು ಎನ್ನುವ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದ್ದು ಇದಕ್ಕೆ ದಕ್ಷಿಣ ಭಾರತದ ರಾಜ್ಯಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ನವದೆಹಲಿ: ದೇಶಾದ್ಯಂತ ಹಿಂದಿಯನ್ನು ಸಾಮಾನ್ಯ ಭಾಷೆಯನ್ನಾಗಿ ಹೊಂದಬೇಕು ಎನ್ನುವ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದ್ದು ಇದಕ್ಕೆ ದಕ್ಷಿಣ ಭಾರತದ ರಾಜ್ಯಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಈಗ ರಾಹುಲ್ ಗಾಂಧಿ ಈ ವಿಚಾರವಾಗಿ ಟ್ವೀಟ್ ಮಾಡಿ ಭಾರತದಲ್ಲಿ ಅನೇಕ ಭಾಷೆಗಳಿರುವುದು ಅದರ ದೌರ್ಬಲ್ಯವಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ನಲ್ಲಿ ಅವರು 23 ಭಾಷೆಗಳನ್ನು ಉಲ್ಲೇಖಿಸಿ ಅವುಗಳಿಗೆ ಭಾರತೀಯ ಧ್ವಜದ ಎಮೊಜಿಯನ್ನು ಟ್ಯಾಗ್ ಮಾಡಿದ್ದಾರೆ. ಹಿಂದಿಯನ್ನು ಸಾಮಾನ್ಯ ಭಾಷೆ ಮಾಡಬೇಕೆನ್ನುವ ಅಮಿತ್ ಶಾ ಮನವಿಗೆ ವಿರೋಧಿಸಿದವರಲ್ಲಿ ಈಗ ರಾಹುಲ್ ಗಾಂಧಿ ಕೂಡ ಸೇರಿದ್ದಾರೆ.ಸದ್ಯ ಇಂಗ್ಲಿಶ್ ಹಾಗೂ ಹಿಂದಿ ಕೇಂದ್ರದ ಅಧಿಕ್ರತ ಭಾಷೆಗಳಾಗಿವೆ.
ಇಂದು ಕಮಲ್ ಹಾಸನ್ , ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅಮಿತ್ ಶಾ ಅವರ ಹೇಳಿಕೆ ವಿರೋಧ ವ್ಯಕ್ತ ಪಡಿಸಿದವರಲ್ಲಿ ಪ್ರಮುಖ ನಾಯಕರಾಗಿದ್ದಾರೆ. ಇನ್ನೊಂದೆಡೆಗೆ ಸಿಎಂ ಯಡಿಯೂರಪ್ಪ ಅಮಿತ್ ಶಾ ಅವರ ಹೇಳಿಕೆಗೆ ಭಿನ್ನ ನಿಲುವು ತಾಳಿ ಟ್ವೀಟ್ ಮಾಡಿದ್ದಾರೆ 'ಭಾರತೀಯ ಸಂವಿಧಾನ ಅಂಗೀಕರಿಸಿದ ಭಾಷೆಗಳಲ್ಲಿ ಯಾವುದೇ ತಾರತಮ್ಯ ಸಲ್ಲದು. ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಅಧಿಕೃತ ಭಾಷೆ ಮತ್ತು ಕನ್ನಡ ಭಾಷಾ ಸ್ವಾಭಿಮಾನಕ್ಕೆ ಧಕ್ಕೆ ತರುವ ಯಾವ ಪ್ರಯತ್ನವನ್ನೂ ನಮ್ಮ ಸರ್ಕಾರ ಸಹಿಸುವುದಿಲ್ಲ' ಎಂದು ಹೇಳಿದ್ದಾರೆ.