ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ಮಗು ಸಾವು!
ಈ ಆರೋಪವನ್ನು ತಳ್ಳಿಹಾಕಿರುವ ಆಸ್ಪತ್ರೆ ಆಡಳಿತ ಮಂಡಳಿ, ಮಗು ನಿಶ್ಯಕ್ತಿಯಿಂದ ಸಾವನ್ನಪ್ಪಿದೆ ಎಂದಿದ್ದಾರೆ.
ದರ್ಭಾಂಗ್: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದ 9 ದಿನದ ಹಸುಗೂಸಿಗೆ ಇಲಿಗಳು ಕಚ್ಚಿದ ಪರಿಣಾಮ ಮಗು ಸಾವನ್ನಪ್ಪಿದ ಧಾರುಣ ಘಟನೆ ಬಿಹಾರದ ದರ್ಭಾಂಗ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಂಗಳವಾರ ನಡೆದಿದೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಆಸ್ಪತ್ರೆ ಆಡಳಿತ ಮಂಡಳಿ, ಮಗು ನಿಶ್ಯಕ್ತಿಯಿಂದ ಸಾವನ್ನಪ್ಪಿದೆ ಎಂದಿದ್ದಾರೆ.
ನಿಶ್ಯಕ್ತಿಯಿಂದ ಬಳಲುತ್ತಿದ್ದ ಮಗುವನ್ನು ಸೋಮವಾರ ದರ್ಭಾಂಗ್ ಆಸ್ಪತ್ರೆಗೆ ದಾಖಲಿಸಿದ್ದೆವು. ಆದರೆ ಆಸ್ಪತ್ರೆ ಸಿಬ್ಬಂದಿಯಾ ನಿರ್ಲಕ್ಷ್ಯದಿಂದ ಮಂಗಳವಾರ ಬೆಳಿಗ್ಗೆ ಮಗು ಸಾವನ್ನಪ್ಪಿದೆ. ಸೋಮವಾರ ರಾತ್ರಿ ಮಗುವನ್ನು ನೋಡಲು ತೀವ್ರ ನಿಗಾ ಘಟಕಕ್ಕೆ ತೆರಳಿದ ಸಂದರ್ಭದಲ್ಲಿ ಇಲಿಗಳು ಮಗುವಿನ ಕಾಲು ಮತ್ತು ಕೈ ಬೆರಳುಗಳನ್ನು ಕಚ್ಚಿರುವ ಗುರುತು ಕಂಡು ಆತಂಕವಾಯಿತು. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಗೆ ತಿಲಿಸಿದೆವಾದರೂ, ಆಗಲೇ ಮಗು ಮೃತಪಟ್ಟಿರುವುದಾಗಿ ಅವರು ಹೇಳಿದರು ಎಂದು ಮಗುವಿನ ತಂದೆ ಪುರಾನ್ ಚುಪಾಲ್ ಹೇಳಿದ್ದಾರೆ.
ಈ ಆರೋಪವನ್ನು ತಳ್ಳಿ ಹಾಕಿರುವ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಕೆ.ಎನ್.ಮಿಶ್ರಾ ಆಸ್ಪತ್ರೆಗೆ ಮಗುವನ್ನು ಕರೆತಂದಾಗಳೆ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು. ಅಲ್ಲದೆ, ಮಗುವಿನ ದೇಹದ ಮೇಲೆ ಇಲಿ ಕಚ್ಚಿರುವ ಯಾವುದೇ ಗುರುತುಗಳಿಲ್ಲ ಎಂದಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆಗೆ ಪೋಷಕರು ಒತ್ತಾಯಿಸಿದ್ದಾರೆ.