ನವದೆಹಲಿ: ಜೂನ್‌ 21ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಮುಖ್ಯ ಕಾರ್ಯಕ್ರಮವನ್ನು ಜಾರ್ಖಂಡ್‌ ರಾಜ್ಯದ ರಾಜಧಾನಿ ರಾಂಚಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕರ್ಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಆಯುಷ್‌ ಸಚಿವಾಲಯದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ರಾಂಚಿಯ ಪ್ರಭಾತ್‌ ತಾರಾ ಮೈದಾನದಲ್ಲಿ ನಡೆಯಲಿರುವ ಯೋಗ ದಿನ ಕಾರ್ಯಕ್ರಮದಲ್ಲಿ ಸುಮಾರು 30,000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಜೂನ್‌ 13ರಂದು ರಾಂಚಿಯಲ್ಲಿ ಕಾರ್ಯಕ್ರಮ ಪೂರ್ವ ಸಭೆ ನಡೆಯಲಿದ್ದು, ಅನೇಕ ರಾಜ್ಯಗಳ ಗಣ್ಯರು, ಯೋಗ ಸಂಘಟನೆಗಳು ಮತ್ತು ಯೋಗ ಶಿಕ್ಷಕರು ಭಾಗವಹಿಸಲಿದ್ದಾರೆ. ಆಯುಷ್ ಇಲಾಖೆಯು 2015ರಿಂದಲೂ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. 


ದೆಹಲಿಯಲ್ಲಿ ರಾಜ್ ಪಥ್ ನಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದ್ದು, ಆಯುಷ್ ಸಚಿವಾಲಯದ ಸಹಯೋಗದೊಂದಿಗೆ ನವದೆಹಲಿ ಮುನಿಸಿಪಲ್ ಕಾರ್ಪೋರೇಶನ್ ಕಾರ್ಯಕ್ರಮ ಆಯೋಜಿಸಲಿದೆ. ಉಳಿದಂತೆ ನೆಹರು ಪಾರ್ಕ್, ಲೋಧಿ ಗಾರ್ಡನ್, ಯಮುನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಸ್ವರ್ಣ ಜಯಂತಿ ಪಾರ್ಕ್ - ರೋಹಿಣಿ ಮತ್ತು ದ್ವಾರಕಾ ಸೆಕ್ಟರ್ -11 ರಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಸಚಿವಾಲಯ ಹೇಳಿದೆ. 


ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯಗಳು, ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಇತರ ಸಂಬಂಧಿತ ಸಂಸ್ಥೆಗಳ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುವಂತೆ ಹಾಗೂ ಕಾರ್ಯಕ್ರಮದಲ್ಲಿ ಎಲ್ಲಾ ಅಧಿಕಾರಿಗಳೂ ಪಾಲ್ಗೊಳ್ಳುವಂತೆ ಸೂಚನೆ ನೀಡಲಾಗಿದೆ.