ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಜಮ್ಮುವಿನಲ್ಲಿ ಇಂಟರ್ನೆಟ್ ಸೇವೆ ಪುನರಾರಂಭಗೊಂಡಿದ್ದು, ರಾಜೌರಿ ಮತ್ತು ಪೂಂಚ್ ಬಳಿಕ ರಾಂಬನ್, ಕಿಶ್ತ್ವಾರ್ ಮತ್ತು ದೋಡಾ ಜಿಲ್ಲೆಗಳಲ್ಲಿ ದೂರವಾಣಿ ಸೇವೆ ಆರಂಭವಾಗಿದೆ.


COMMERCIAL BREAK
SCROLL TO CONTINUE READING

ಸದ್ಯ ಜಮ್ಮು ಮತ್ತು ಕಾಶ್ಮೀರದ 22 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಸಾಮಾನ್ಯವಾಗಿದ್ದು, ಪೂಂಚ್ ಮತ್ತು ರಾಜೌರಿ ಜಿಲ್ಲೆಯಲ್ಲಿ ಲ್ಯಾಂಡ್ ಲೈನ್ ಫೋನ್‌ಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ. ಈ ಜಿಲ್ಲೆಗಳಲ್ಲಿ ಲ್ಯಾಂಡ್‌ಲೈನ್ ಬ್ರಾಡ್‌ಬ್ಯಾಂಡ್ ಮೇಲಿನ ನಿಷೇಧವನ್ನು ತೆಗೆದುಹಾಕಲಾಗಿದ್ದು, ಜನರು ತಮ್ಮ ಇಂಟರ್ನೆಟ್ ಅನ್ನು ಬಳಸಲು ಸಾಧ್ಯವಾಗಿದೆ.


ಉಳಿದ 10 ಜಿಲ್ಲೆಗಳಲ್ಲಿ ಪರಿಸ್ಥಿತಿ ನಿಧಾನಗತಿಯಲ್ಲಿ ಸಹಜ ಸ್ಥಿತಿಗೆ ಬರುತ್ತಿದ್ದು, ಶೀಘ್ರದಲ್ಲೇ ಈ ಜಿಲ್ಲೆಗಳ ಮೇಲೆ ಹೇರಲಾಗಿರುವ ನಿರ್ಬಂಧಗಳನ್ನು ತೆಗೆದುಹಾಕಲಾಗುವುದು ಎಂದು ರಾಜ್ಯಾಡಳಿತ ಇಂದು ಪ್ರಕಟಿಸಿದೆ. ಪಾಕಿಸ್ತಾನ ಭಯೋತ್ಪಾದಕ ದಾಳಿಗಳನ್ನು ನಡೆಸಲು ಯೋಜಿಸಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಮೊಬೈಲ್ ಮತ್ತು  ಇಂಟರ್ನೆಟ್ನಲ್ಲಿ ಸೇವೆಗಳ ಮೇಲಿನ ನಿರ್ಬಂಧ ಮುಂದುವರೆದಿದೆ.


ಮಾರ್ಚ್ 2019ರ ಅಂಕಿ-ಅಂಶಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ 1,20,000 ಲ್ಯಾಂಡ್‌ಲೈನ್ ಸಂಪರ್ಕಗಳಿದ್ದು, 1.37 ಕೋಟಿ ಮೊಬೈಲ್ ಸಂಪರ್ಕ, 58 ಲಕ್ಷ ಇಂಟರ್ನೆಟ್ ಸಂಪರ್ಕವಿದೆ.