ನವದೆಹಲಿ: ಪಂಜಾಬ್‌ ನ್ಯಾಶನಲ್‌ ಬ್ಯಾಂಕಿಗೆ 13,578 ಕೋಟಿ ರೂ. ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿರುವ ವಜ್ರಾಭರಣ ವ್ಯಾಪಾರಿ ನೀರವ್‌ ಮೋದಿ ವಿರುಧ್ದ ರೆಡ್ ಕಾರ್ನರ್ ನೋಟೀಸ್ ಜಾರಿಯಾಗಿದೆ. ವಾಸ್ತವವಾಗಿ, ಇಂಟರ್ನ್ಯಾಷನಲ್ ಕ್ರಿಮಿನಲ್ ಪೋಲಿಸ್ ಆರ್ಗನೈಸೇಶನ್ (ಇಂಟರ್ಪೋಲ್) ಸೋಮವಾರ 13,578 ಕೋಟಿ ರೂ. ಮೌಲ್ಯದ ಹಗರಣಕ್ಕೆ ರೆಡ್ ಕಾರ್ನರ್ ನೋಟಿಸ್ (RCN) ಜಾರಿಮಾಡಿದೆ. 


COMMERCIAL BREAK
SCROLL TO CONTINUE READING

ವಂಚನೆ ಪ್ರಕರಣ ನಂತರ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ನೀರವ್ ಮೋದಿಗೆ ರೆಡ್ ಕಾರ್ನರ್ ನೋಟಿಸ್ ನೀಡುವಂತೆ ಸಿಬಿಐ ಇಂಟರ್ ಪೋಲ್ ಗೆ ಪತ್ರ ಬರೆದಿತ್ತು. ಮಾಹಿತಿ ಪ್ರಕಾರ ಸಿಬಿಐ ಮತ್ತು ಇಡಿ- ನೀರವ್ ಮೋದಿ ವಿರುದ್ಧ ವಂಚನೆ, ಕ್ರಿಮಿನಲ್ ಪಿತೂರಿ, ಭ್ರಷ್ಟಾಚಾರ ಮತ್ತು ಮನಿ ಲಾಂಡರಿಂಗ್ ಪ್ರಕರಣಗಳಲ್ಲಿ ರೆಡ್ ಕಾರ್ನರ್ ನೋಟಿಸ್ ನೀಡುವಂತೆ ಇಂಟರ್ ಪೋಲ್ ಗೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ನೀರವ್ ಮೋದಿ ವಿರುದ್ಧ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ನೀಡಿದ್ದು ನೀರವ್ ಮೋದಿ ಯಾವುದೇ ದೇಶದಲ್ಲಿ ಅಡಗಿದ್ದರೂ ಬಂಧಿಸುವ ಸಾಧ್ಯತೆ ಇದೆ. 



ಕಳೆದ ಜೂನ್‌ 29ರ ಶುಕ್ರವಾರದಂದು ಇಂಟರ್‌ ಪೋಲ್‌ ರೆಡ್‌ ಕಾರ್ನರ್‌ ನೊಟೀಸ್‌ ಜಾರಿ ಮಾಡಿದ್ದು ಅದನ್ನು ಇಂದು(ಸೋಮವಾರ) ಅಂತಾರಾಷ್ಟ್ರೀಯ ಪೊಲೀಸ್‌ ಸಹಕಾರ ಸಂಸ್ಥೆ ಬಹಿರಂಗಪಡಿಸಿದೆ.


ಇಂಟರ್ಪೋಲ್ ರೆಡ್ ಕಾರ್ನರ್ ನೋಟೀಸ್ ಎಂದರೇನು?
ಮುಂಬಯಿಯ ವಿಶೇಷ ನ್ಯಾಯಾಲಯದಲ್ಲಿ ಸಿಬಿಐ ಚಾರ್ಜ್‌ ಶೀಟ್‌ ದಾಖಲಿಸಿರುವುದನ್ನು ಅನುಸರಿಸಿ ಇಂಟರ್‌ಪೋಲ್‌ಗೆ ರೆಡ್‌ ಕಾರ್ನರ್‌ ನೊಟೀಸ್‌ ಜಾರಿ ಮಾಡುವುದು ಕಾನೂನು ಪ್ರಕಾರ ಸಾಧ್ಯವಾಗಿದೆ. ಇದರಿಂದಾಗಿ ಇಂಟರ್‌ ಪೋಲ್‌ ತನ್ನ 192 ಸದಸ್ಯ ರಾಷ್ಟ್ರಗಳಿಗೆ ಆರೋಪಿ ತಮ್ಮ ದೇಶದಲ್ಲಿ ತಲೆಮರೆಸಿಕೊಂಡಿದ್ದಲ್ಲಿ ಅವರನ್ನು ಪತ್ತೆ ಹಚ್ಚಿ ಬಂಧಿಸುವಂತೆ ಸೂಚಿಸಲಿದೆ. ಆರೋಪಿಗಳ ಬಗ್ಗೆ ಇತರ ದೇಶಗಳಿಗೆ ಎಚ್ಚರಿಸುವುದು ರೆಡ್ ಕಾರ್ನರ್ ನೋಟೀಸ್ ನೀಡುವುದರ ಉದ್ದೇಶ. ಇದು ಅಪರಾಧಿಗಳು ಅಂತಾರಾಷ್ಟ್ರೀಯ ಗಡಿಗಳನ್ನು ದಾಟಿ ಪ್ರಯಾಣಿಸುವುದು ಅಸಾಧ್ಯವಾಗಲಿದ್ದು ಇದರ ಪರಿಣಾವಾಗಿ ಅವರ ಬಂಧನ ಸಾಧ್ಯವಾಗಲಿದೆ. ಅನಂತರದಲ್ಲಿ ಆ ದೇಶದಿಂದ ಆರೋಪಿಗಳನ್ನು ಭಾರತಕ್ಕೆ ಕರೆತರಲು ಮಾಡುವ ಕಾನೂನು ಪ್ರಕ್ರಿಯೆ ಆರಂಭವಾಗಲಿದೆ.