ರಾಷ್ಟ್ರಪತಿ ನಿಮ್ಮ ಪಾಕೆಟ್ ನಲ್ಲಿದ್ದಾರೆಯೇ? -ಬಿಜೆಪಿ ವಿರುದ್ಧ ಶಿವಸೇನಾ ವಾಗ್ದಾಳಿ
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕುರಿತು ಶಿವಸೇನಾ ಮತ್ತು ಬಿಜೆಪಿ ಮಧ್ಯ ನಡೆದಿರುವ ಶೀತಲ ಸಮರ ಈಗ ತಾರಕ್ಕೇರಿದೆ. ಈಗ ರಾಷ್ಟ್ರಪತಿ ಆಡಳಿತ ಹೇರುವ ಕುರಿತಾಗಿ ಬಿಜೆಪಿ ಸಚಿವ ಸುಧೀರ್ ಮುಂಗಂತಿವಾರ್ ನೀಡಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಶಿವಸೇನಾ ಇದು ರಾಜ್ಯಕ್ಕೆ ಮತ್ತು ಜನರ ಆದೇಶಕ್ಕೆ ಮಾಡಿರುವ ಅವಮಾನ ಎಂದು ಹೇಳಿದೆ.
ನವದೆಹಲಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕುರಿತು ಶಿವಸೇನಾ ಮತ್ತು ಬಿಜೆಪಿ ಮಧ್ಯ ನಡೆದಿರುವ ಶೀತಲ ಸಮರ ಈಗ ತಾರಕ್ಕೇರಿದ್ದು. ಈಗ ರಾಷ್ಟ್ರಪತಿ ಆಡಳಿತ ಹೇರುವ ಕುರಿತಾಗಿ ಬಿಜೆಪಿ ಸಚಿವ ಸುಧೀರ್ ಮುಂಗಂತಿವಾರ್ ನೀಡಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಶಿವಸೇನಾ ಇದು ರಾಜ್ಯಕ್ಕೆ ಮತ್ತು ಜನರ ಆದೇಶಕ್ಕೆ ಮಾಡಿರುವ ಅವಮಾನ ಎಂದು ಹೇಳಿದೆ.
ನವೆಂಬರ್ 7 ರೊಳಗೆ ರಾಜ್ಯದಲ್ಲಿ ಹೊಸ ಸರ್ಕಾರ ಜಾರಿಯಾಗದಿದ್ದರೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಮುಂದಾಗಬಹುದು ಎಂದು ಹಣಕಾಸು ಸಚಿವ ಮತ್ತು ಬಿಜೆಪಿ ಮುಖಂಡ ಮುಂಗಂತಿವಾರ್ ಶುಕ್ರವಾರ ಹೇಳಿದ್ದರು. ಮಹಾರಾಷ್ಟ್ರದಲ್ಲಿ ಈಗಿರುವ ವಿಧಾನಸಭೆಯ ಅಧಿಕಾರಾವಧಿ ನವೆಂಬರ್ 8 ಕ್ಕೆ ಕೊನೆಗೊಳ್ಳುತ್ತದೆ.
ಮುಂಗಾಟಿವಾರ್ ಅವರು 'ಹೊಸ ಸರ್ಕಾರವು ನಿಗದಿತ ಸಮಯದೊಳಗೆ ಜಾರಿಯಲ್ಲಿರಬೇಕು, ಇಲ್ಲದಿದ್ದರೆ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕಾಗುತ್ತದೆ 'ಎಂದು ಹೇಳಿದ್ದರು.ಈಗ ಶಿವಸೇನಾ ತನ್ನ ಮುಖವಾಣಿ ಸಾಮ್ನಾದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದು, ಮುಂಗಂತಿವಾರ್ ಅವರ ಹೇಳಿಕೆಗಳು ಬಿಜೆಪಿ ಮತ್ತು ಅವರ ಮನಸ್ಸಿನಲ್ಲಿನ ವಿಷವನ್ನು ತೋರಿಸುತ್ತದೆ ಎಂದು ಹೇಳಿದೆ.
'ಮುಂಗಂತಿವಾರ್ ನೀಡಿದ ಬೆದರಿಕೆಯಿಂದ ಸಾಮಾನ್ಯ ಜನರು ಏನು ಮಾಡಬೇಕು? ಇದರರ್ಥ ಭಾರತದ ರಾಷ್ಟ್ರಪತಿಗಳು ನಿಮ್ಮ ಕಿಸೆಯಲ್ಲಿದ್ದಾರೆ ಅಥವಾ ರಾಷ್ಟ್ರಪತಿಗಳ ಮುದ್ರೆ ಮಹಾರಾಷ್ಟ್ರದ ಬಿಜೆಪಿ ಕಚೇರಿಯಲ್ಲಿ ಮಲಗಿದೆ ಎಂದು ಅರ್ಥೈಸಬೇಕೇ? ಆ ಪಕ್ಷವು ತನ್ನ ಸರ್ಕಾರವನ್ನು ರಚಿಸಲು ಸಾಧ್ಯವಾಗದಿದ್ದಲ್ಲಿ ಆ ಮುದ್ರೆಯನ್ನು ಬಳಸಿಕೊಂಡು ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿಗಳ ಆಡಳಿತವನ್ನು ಬಿಜೆಪಿ ವಿಧಿಸಬಹುದೆಂದು ಈ ಜನರಿಗೆ ತಿಳಿಸಲು ಪ್ರಯತ್ನಿಸುತ್ತಿದ್ದಾರೆಯೇ?' ಎಂದು ಸಾಮ್ನಾ ಸಂಪಾದಕೀಯದಲ್ಲಿ ಶಿವಸೇನಾ ಪ್ರಶ್ನಿಸಿದೆ. ಇನ್ನು ಮುಂದುವರೆದು ' ಇದು ಮಹಾರಾಷ್ಟ್ರಕ್ಕೆ ಮಾಡಿದ ಅವಮಾನ, ಅವರ ಹೇಳಿಕೆ ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಂವಿಧಾನಿಕ ಎಂದು ಕರೆದಿದೆ.
ಕಳೆದ ವಾರ, ರಾಜ್ಯದ 288 ಸ್ಥಾನಗಳಲ್ಲಿ 105 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ ಮತ್ತು ಶಿವಸೇನಾ 56 ಸ್ಥಾನಗಳನ್ನು ಗಳಿಸಿತು. ಈಗ ಉಭಯ ಪಕ್ಷಗಳ ಮಧ್ಯ 50:50 ಸೂತ್ರವನ್ನು ಅನುಷ್ಟಾನಕ್ಕೆ ತರುವ ವಿಚಾರವಾಗಿ ಮುಸುಕಿನ ಗುದ್ದಾಟ ನಡೆಯುತ್ತಿದೆ.