ಇಸ್ರೇಲ್ - ಹಮಾಸ್ ಕದನ: ಗಾಜಾದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲು ಐಡಿಎಫ್ ಹೊಂದಿರುವ ಅನುಕೂಲ ಅನಾನುಕೂಲಗಳು
Israel-Hamas war Updates: ಹಮಾಸ್ ಉಗ್ರರು ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ ಬಳಿಕ, ಬಹಳಷ್ಟು ಜನರು, ಅದರಲ್ಲೂ ರಕ್ಷಣಾ ತಜ್ಞರು ಇಸ್ರೇಲಿ ಸೇನೆಯ ಬಳಿ ಉಳಿದಿರುವ ಸಂಪನ್ಮೂಲಗಳೆಷ್ಟು ಎಂಬ ಕುರಿತು ಗಮನ ಹರಿಸುತ್ತಿದ್ದಾರೆ.
Israel-Hamas war : ಇಸ್ರೇಲ್ ಆಡಳಿತಗಾರರು ಈಗಾಗಲೇ ಮಹತ್ವದ ಭೂ ಕಾರ್ಯಾಚರಣೆಯನ್ನು ಘೋಷಿಸಿರುವುದರಿಂದ, ಇಸ್ರೇಲ್ ಹೊಂದಿರು ಸಂಪನ್ಮೂಲಗಳ ಪ್ರಮಾಣ ಮಹತ್ವದ್ದಾಗಿದೆ. ಪ್ರಸ್ತುತ ಪರಿಸ್ಥಿತಿ ಬಹಳ ಗಂಭೀರವಾಗಿದ್ದು, ಇಸ್ರೇಲಿನ ಬದಿಯಲ್ಲಿ 1,400 ಸಾವುಗಳು ಸಂಭವಿಸಿದರೆ, ಪ್ಯಾಲೆಸ್ತೀನ್ ಬದಿಯಲ್ಲಿ 2,670 ಸಾವುಗಳು ಸಂಭವಿಸಿವೆ.
ಇಸ್ರೇಲಿ ಸೇನೆಯ ಪ್ರಮುಖ ಶಕ್ತಿ ಅದರ ವಾಯುಪಡೆ. ಇಸ್ರೇಲಿ ವಾಯುಪಡೆಯ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಅಮೆರಿಕನ್ ಎಫ್-16 ವಿಮಾನಗಳು (9 ಸ್ಕ್ವಾಡ್ರನ್‌ಗಳು, ಅಂದಾಜು 180 ವಿಮಾನಗಳು) ಹಾಗೂ ಎಫ್-35 ವಿಮಾನಗಳಿವೆ (ಎರಡು ಸ್ಕ್ವಾಡ್ರನ್‌ಗಳು). ಇವುಗಳು ಜಾಗತಿಕವಾಗಿ ಅತ್ಯಂತ ತಾಂತ್ರಿಕವಾಗಿ ಅತ್ಯಾಧುನಿಕವಾದ ವಿಮಾನಗಳಾಗಿವೆ. ಇಸ್ರೇಲ್ ಗಾಜಾಗೆ ಅತ್ಯಂತ ಸನಿಹದಲ್ಲಿ ಇರುವುದರಿಂದ, ಪ್ಯಾಲೆಸ್ತೀನಿಗೆ ಹೋಲಿಸಿದರೆ ಇಸ್ರೇಲ್ ಸಾಕಷ್ಟು ಮಿಲಿಟರಿ ಮೇಲುಗೈ ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ, ಈ ಸಾಮರ್ಥ್ಯದ ಕಾರಣದಿಂದ ಇಸ್ರೇಲ್ ತನ್ನ ಮೇಲೆ ಹೆಚ್ಚಿನ ಅಪಾಯಗಳನ್ನು ಎಳೆದುಕೊಳ್ಳದೆ ಹಮಾಸ್ ವಿರುದ್ಧ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಿತ್ತು.
ಇದನ್ನೂ ಓದಿ-ಮೊದಲ ಬಾರಿಗೆ ಮಹಿಳಾ ಪೋಲೀಸರಿಂದ ಎನ್ ಕೌಂಟರ್ ! ನವರಾತ್ರಿ ವೇಳೆ ದುರ್ಗೆ ರೂಪ ತಾಳಿ ದುಷ್ಟರಿಗೆ ಶಿಕ್ಷೆ
ಇಸ್ರೇಲಿನ ವಾಯುದಾಳಿ ಸಾಮರ್ಥ್ಯದಲ್ಲಿ ದಾಳಿ ಹೆಲಿಕಾಪ್ಟರ್‌ಗಳು (ಎರಡು ಸ್ಕ್ವಾಡ್ರನ್ ಅಪಾಚೆ) ಹಾಗೂ ವಿವಿಧ ರೀತಿಯ ಡ್ರೋನ್‌ಗಳು ಸೇರಿವೆ. ಈ ಡ್ರೋನ್‌ಗಳು ವಿಚಕ್ಷಣೆ, ಆರ್ಟಿಲರಿ ದಾಳಿಯನ್ನು ನಿರ್ದೇಶಿಸುವುದು ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಕೆಯಾಗುತ್ತವೆ. ಶಸ್ತ್ರಸಜ್ಜಿತ ಡ್ರೋನ್‌ಗಳು ಗುಪ್ತಚರ ಮಾಹಿತಿಗಳನ್ನು ಕಲೆಹಾಕುವುದರ ಜೊತೆಗೆ ದಾಳಿ ನಡೆಸಲೂ ಬಳಕೆಯಾಗುತ್ತವೆ.
ಇಸ್ರೇಲಿ ಸೇನಾಪಡೆಗೆ 'ಹರೋಪ್ ಆ್ಯಂಡ್ ಹರ್ಪಿ ಮಾಡೆಲ್'ನಂತಹ ಆತ್ಮಹತ್ಯಾ ಡ್ರೋನ್‌ಗಳ ಪೂರೈಕೆಯೂ ಇದೆ. ಈ ಡ್ರೋನ್‌ಗಳನ್ನು 'ಹಾರಾಡುವ ಆಯುಧ' ಎಂದೂ ಕರೆಯಲಾಗುತ್ತದೆ. ಈ ಡ್ರೋನ್‌ಗಳು ಸ್ವಯಂಚಾಲಿತವಾಗಿ ಚಲಿಸುತ್ತಿರುವ ಗುರಿಗಳನ್ನು ಗುರುತಿಸಿ, ಹಿಂಬಾಲಿಸಿ, ಅವುಗಳ ಮೇಲೆ ಇಳಿದು, ಅದನ್ನು ನಾಶಗೊಳಿಸುತ್ತವೆ.
ಪ್ರತಿ ಇಪ್ಪತ್ತು ವರ್ಷಗಳಿಗೆ, ಇಸ್ರೇಲ್ ತನ್ನ ಶತ್ರುಗಳನ್ನು ಇನ್ನಷ್ಟು ದೂರದಿಂದ ಸೆಣಸುವ ಕಾರ್ಯತಂತ್ರವನ್ನು ಹೊಂದುತ್ತದೆ. ಇದರಲ್ಲಿ ಬಹುಪಾಲು ವಾಯು ಕಾರ್ಯಾಚರಣೆಗಳನ್ನು ಕೈಗೊಂಡು, ತನ್ನ ಸೈನಿಕರಿಗೆ ಎದುರಾಗುವ ಅಪಾಯಗಳನ್ನು ಕಡಿಮೆಗೊಳಿಸುವ ಮಾರ್ಗ ಪ್ರಮುಖವಾಗಿದೆ.
"ಆದರೆ, ಈ ವಿಧಾನ ಸಂಕೀರ್ಣವಾದ ನಗರ ಪ್ರದೇಶದಲ್ಲಿ ಸೂಕ್ತವಾಗುವುದಿಲ್ಲ. ಈ ವಿಧಾನ ತಕ್ಕಮಟ್ಟಿಗೆ ಹಾನಿ ಉಂಟು ಮಾಡುತ್ತದಾದರೂ, ಇಸ್ರೇಲಿನ ಗುರಿಗಳು ಗಾಜಾದ ಹಲವಾರು ಭೂಮಿಯಾಳದ ಸುರಂಗಗಳಲ್ಲಿ ಬಚ್ಚಿಟ್ಟುಕೊಂಡು ಪಾರಾಗುವ ಸಾಧ್ಯತೆಗಳಿವೆ. ಇಂತಹ ವಾಯುದಾಳಿಗಳಿಂದ ನಾಗರಿಕರಿಗೆ ಹೆಚ್ಚಿನ ಅಪಾಯ ತಲೆದೋರುವ ಅಪಾಯಗಳಿವೆ" ಎಂದು ಮಧ್ಯ ಪೂರ್ವದ ಕುರಿತು ಹಲವಾರು ಕೃತಿಗಳನ್ನು ರಚಿಸಿರುವ ಕೊಲೊನೆಲ್ ಮಿಚೆಲ್ ಗೋಯಾ ಅಭಿಪ್ರಾಯ ಪಡುತ್ತಾರೆ.
ನಿಖರ ಬಾಂಬ್‌ಗಳು: ಇಸ್ರೇಲಿನ ಬಲಹೀನತೆ
ಇಸ್ರೇಲಿ ಡಿಫೆನ್ಸ್ ಫೋರ್ಸಸ್ (ಐಡಿಎಫ್) ಮೂರು ಪ್ರಮುಖ ಭೂ ಕಾರ್ಯಾಚರಣೆಗಳನ್ನು ನಡೆಸಿವೆ. ಮೊದಲನೆಯ ಕಾರ್ಯಾಚರಣೆಯನ್ನು 2006ರಲ್ಲಿ ನಡೆದಿದ್ದು, ಇಸ್ರೇಲಿ ಸೈನಿಕ ಗಿಲಾಡ್ ಶಲಿತ್ ಅಪಹರಣಕ್ಕೆ ಪ್ರತಿಯಾಗಿ ಇದನ್ನು ಕೈಗೊಳ್ಳಲಾಗಿತ್ತು. ಎರಡನೆಯ ಕಾರ್ಯಾಚರಣೆ 2008-2009ರಲ್ಲಿ ನಡೆಯಿತು. ಇದನ್ನು ಆಪರೇಶನ್ ಕಾಸ್ಟ್ ಲೀಡ್ ಎಂದು ಕರೆಯಲಾಗಿತ್ತು. 2014ರಲ್ಲಿ ನಡೆದ ಮೂರನೆಯ ಕಾರ್ಯಾಚರಣೆಯನ್ನು ಆಪರೇಶನ್ ಪ್ರೊಟೆಕ್ಟಿವ್ ಎಡ್ಜ್ ಎನ್ನಲಾಗಿತ್ತು.
ಈ ಕಾರ್ಯಾಚರಣೆಗಳಲ್ಲಿ, ಹಮಾಸ್ ಉಗ್ರರನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಪ್ರತಿಯೊಂದು ಕಾರ್ಯಾಚರಣೆಯಲ್ಲೂ ಎರಡೂ ಪಕ್ಷಗಳು ಸಾಕಷ್ಟು ನಷ್ಟ ಅನುಭವಿಸಿದವು. 2006ರ ಕಾರ್ಯಾಚರಣೆಯಲ್ಲಿ ಐವರು ಇಸ್ರೇಲಿ ನಾಗರಿಕರು ಸಾವಿಗೀಡಾದರೆ, 277 ಪ್ಯಾಲೆಸ್ತೀನ್ ಹೋರಾಟಗಾರರು ಸಾವಿಗೀಡಾದರು. 2008ರಲ್ಲಿ ಹತ್ತು ಇಸ್ರೇಲಿಗರು ಮತ್ತು 700 ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದರು. 2014ರಲ್ಲಿ 66 ಇಸ್ರೇಲಿಗರು ಪ್ರಾಣ ಕಳೆದುಕೊಂಡರೆ, ಸಾರ್ವಜನಿಕರು, ಸೈನಿಕರು ಸೇರಿದಂತೆ 2,200 ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದರು.
ಈ ಪ್ರತಿಯೊಂದು ಕಾರ್ಯಾಚರಣೆಗಳಲ್ಲೂ ಈ ಬಾರಿಯಂತೆಯೇ ಬಾಂಬ್ ದಾಳಿಗಳನ್ನು ಕೈಗೊಳ್ಳಲಾಗುತ್ತಿತ್ತು. ಆದರೆ, ಅಕ್ಟೋಬರ್ 7ರ ದಾಳಿಯ ಮರುದಿನ ನಡೆದ ಕಾರ್ಯಾಚರಣೆಯನ್ನು ಸ್ವಾರ್ಡ್ಸ್ ಆಫ್ ಐರನ್ ಎಂದು ಕರೆಯಲಾಗಿತ್ತು. ಇದು ಈ ಹಿಂದೆ ನಡೆದ ಎಲ್ಲ ಕಾರ್ಯಾಚರಣೆಗಳಿಂದಲೂ ದೊಡ್ಡದಾಗಿತ್ತು.
ಗೋಯಾ ಅವರ ಪ್ರಕಾರ, ಇಂದು ಇಸ್ರೇಲಿ ಸೇನೆ ಎದುರಿಸುತ್ತಿರುವ ಪ್ರಮುಖ ಹಿನ್ನಡೆಯೆಂದರೆ, ನಿರ್ದೇಶಿತ ಬಾಂಬ್ ಮತ್ತು ಕ್ಷಿಪಣಿಗಳ ನಿಯಮಿತ ಪೂರೈಕೆ. ಇದು ಇಸ್ರೇಲಿಗೆ ರಕ್ಷಣೆ ನಡೆಸಿಕೊಳ್ಳಲು ಮತ್ತು ದಾಳಿ ನಡೆಸಲು ಎರಡಕ್ಕೂ ಸವಾಲೊಡ್ಡುತ್ತದೆ. ಅದರಲ್ಲೂ, ಇಸ್ರೇಲನ್ನು ಭೂಮಿ ಮತ್ತು ವಾಯು ದಾಳಿಗಳಿಂದ ರಕ್ಷಿಸುವ ಅತ್ಯಾಧುನಿಕ ತಂತ್ರಜ್ಞಾನವಾದ ಐರನ್ ಡೋಮ್ ಸಮರ್ಪಕವಾಗಿ ಕಾರ್ಯಾಚರಿಸಲು ಸಾಕಷ್ಟು ಸಂಖ್ಯೆಯಲ್ಲಿ ಇಂಟರ್‌ಸೆಪ್ಟರ್‌ಗಳ ಅವಶ್ಯಕತೆಯಿದೆ.
2016-17ರ ಮೊಸುಲ್ ವಿಮೋಚನೆ
ಒಂದು ವೇಳೆ ಇಸ್ರೇಲಿ ಸೇನೆ ಏನಾದರೂ ಭೂ ಕಾರ್ಯಾಚರಣೆ ಆರಂಭಿಸಿದರೆ, ಅದು ತನ್ನ ಬಳಿ ಇರುವ ಅತ್ಯಂತ ಪ್ರಬಲ ಸೇನೆಯ ಮೇಲೆ ಅವಲಂಬಿತವಾಗಿರುತ್ತದೆ. ಇಸ್ರೇಲಿ ಭೂ ಸೇನೆ ತಲಾ 3,000 ಸೈನಿಕರನ್ನು ಒಳಗೊಂಡಿರುವ ಏಳು ಬ್ರಿಗೇಡ್‌ಗಳನ್ನು ಹೊಂದಿದೆ.
ಭಾರೀ ಶಸ್ತ್ರಸಜ್ಜಿತ ವಾಹನಗಳು ಮತ್ತು ಸೈನಿಕರನ್ನು ಹೊಂದಿರುವ ಸಣ್ಣ ವಾಹನಗಳು ಗಾಜಾದೊಳಗೆ ಪ್ರವೇಶಿಸುವ ಸಾಧ್ಯತೆಗಳಿವೆ. ಈ ವಿಧಾನವನ್ನು ಹಲವು ಸಂದರ್ಭಗಳಲ್ಲಿ ಯಶಸ್ವಿಯಾಗಿ ಬಳಸಿಕೊಳ್ಳಲಾಗಿದೆ. 2016-17ರಲ್ಲಿ ಇರಾಕ್ ಸೇನೆ ಇದೇ ರೀತಿಯಲ್ಲಿ ಮೊಸುಲ್ ನಗರವನ್ನು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯಿಂದ ಮರಳಿ ವಶಪಡಿಸಿಕೊಂಡಿತ್ತು.
ಈ ವಿಧಾನದಲ್ಲಿ, ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಬಲ್ಲ ಮಾಮೂಲಿ ರಸ್ತೆಯನ್ನು ಬಳಸಿಕೊಳ್ಳದೆ, ದಾರಿಯಲ್ಲಿರುವ ಕಟ್ಟಡಗಳನ್ನು ತಪ್ಪಿಸಿಕೊಂಡು ಸಾಗಲಾಗುತ್ತದೆ. ಈ ರೀತಿ ಸಾಗುವ ಮೂಲಕ ಪ್ರತಿ ಗಂಟೆಗೆ 20 ಮೀಟರ್, ಅಥವಾ ದಿನಕ್ಕೆ 300 ರಿಂದ 400 ಮೀಟರ್ ದೂರದ ತನಕ ಮಾತ್ರವೇ ಸಾಗುತ್ತದೆ.
ಈ ರೀತಿಯ ಕಾರ್ಯಾಚರಣೆಗಳನ್ನು ನಡೆಸಲು ಚೆನ್ನಾಗಿ ತರಬೇತಿ ಪಡೆದ ಸೈನಿಕರ ಅವಶ್ಯಕತೆಯಿರುತ್ತದೆ. ಇಸ್ರೇಲಿ ಸೇನೆಯ ಬಳಿ 26,000 ಸಕ್ರಿಯ ಯೋಧರಿದ್ದಾರೆ. ಅದರೊಡನೆ, 1,00,000 ಜನ ಕಡ್ಡಾಯ ಸೇನಾ ಸೇವೆಯ ಸೈನಿಕರಿದ್ದಾರೆ. ಒಂದು ವೇಳೆ ಇಸ್ರೇಲ್ ಆರಂಭದಿಂದಲೇ ಮೀಸಲು ಪಡೆಗಳನ್ನು ಕರೆಸಿಕೊಳ್ಳದಿದ್ದರೆ, ಇಸ್ರೇಲ್ ಸೇನೆಗೆ 30,000ಕ್ಕಿಂತ ಹೆಚ್ಚು ಯೋಧರನ್ನು ಯುದ್ಧಭೂಮಿಗೆ ಇಳಿಸುವುದು ಕಷ್ಟಕರವಾಗುತ್ತದೆ. ಇಸ್ರೇಲಿಗೆ ಹೋಲಿಸಿದರೆ, ಹಮಾಸ್ ಸಂಘಟನೆ ಕೇವಲ 7,000 - 10,000 ಹೋರಾಟಗಾರರನ್ನು ಕಣಕ್ಕಿಳಿಸಬಲ್ಲದು. ಅವರೂ ಬಹಳಷ್ಟು ತರಬೇತಿ ಪಡೆದ ಯೋಧರಾಗಿದ್ದಾರೆ. ಮಿಲಿಟರಿ ಮೂಲದ ಅಂದಾಜಿನ ಪ್ರಕಾರ, ಈ ಯುದ್ಧದಲ್ಲಿ ಇಸ್ರೇಲಿ ಸಾವಿನ ಸಂಖ್ಯೆ ಹಲವು ನೂರು ತಲುಪಬಹುದು. ಆದರೆ ಈ ಎಲ್ಲ ನಿರ್ಧಾರಗಳು ಅಂತಿಮವಾಗಿ ರಾಜಕೀಯ ಆಡಳಿತದ ಬಳಿ ಇರುತ್ತದೆ.
ಕಡ್ಡಾಯ ಸೇನಾ ಸೇವೆ ಎಂದರೆ, ಇಸ್ರೇಲ್ ಕಾನೂನಿನ ಪ್ರಕಾರ, ಪ್ರತಿಯೊಬ್ಬ ನಾಗರಿಕನೂ ಇಸ್ರೇಲಿ ಸೇನೆಯಲ್ಲಿ ನಿಗದಿತ ಕಾಲಾವಧಿಗೆ ಕಡ್ಡಾಯವಾಗಿ ಸೇವೆ ಸಲ್ಲಿಸುವುದು ಅನಿವಾರ್ಯವಾಗಿರುತ್ತದೆ.
ಇಸ್ರೇಲ್ ಸರ್ಕಾರ ತನ್ನ ಬಳಿ ಇರುವ ಒಟ್ಟು 4,60,000 ಮೀಸಲು ಸೈನಿಕರ ಪಡೆಯಲ್ಲಿ 3,60,000 ಯೋಧರನ್ನು ಮರಳಿ ಕರೆಸಿಕೊಂಡಿದೆ. ಈ ಮೀಸಲು ಸೇನೆಯಲ್ಲಿ, ಪ್ರತಿ ವರ್ಷವೂ ತರಬೇತಿ ಪಡೆದ, 18ರಿಂದ 40 ವರ್ಷದೊಳಗಿನ ಯುವಕ ಯುವತಿಯರಿದ್ದಾರೆ. ಆದರೆ, ಈಗ ಎದುರಾಗಿರುವ ಅತಿದೊಡ್ಡ ಪ್ರಶ್ನೆಯೆಂದರೆ, ಈ ಮೀಸಲು ಸೈನಿಕರನ್ನು ಗಾಜಾ, ಲೆಬನಾನ್, ಸಿರಿಯಾದ ಗಡಿ ಹಾಗೂ ವೆಸ್ಟ್ ಬ್ಯಾಂಕ್ ಪ್ರದೇಶಗಳಲ್ಲಿ ಕಾರ್ಯಾಚರಿಸಲು ನೇಮಕಗೊಳಿಸಿದ ಬಳಿಕ, ಅವರಿಗೆ ಈ ರೀತಿ ಹಲವು ಯುದ್ಧ ರಂಗಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆಯೇ ಎನ್ನುವುದಾಗಿದೆ. ಇದನ್ನು ಫ್ರೆಂಚ್ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ರಿಲೇಶನ್ಸ್ ಸಂಸ್ಥೆಯಲ್ಲಿ ಸಂಶೋಧಕರಾಗಿರುವ, ಮಧ್ಯ ಪೂರ್ವದ ಸೇನಾಪಡೆಗಳ ತಜ್ಞರೂ ಆಗಿರುವ ಹೆಲೋಯಿಸ್ ಫಾಯೆತ್ ವಿವರಿಸುತ್ತಾರೆ.
ಇದನ್ನೂ ಓದಿ-ಮುಂದಿನ 2 ದಿನ ಈ ಭಾಗಗಳಲ್ಲಿ ಭರ್ಜರಿ ಮಳೆ-ಜಲಪ್ರಳಯದ ಭೀತಿ: ಗುಡುಗು ಮಿಂಚು ಸಹಿತ ಬಿರುಗಾಳಿ ಬೀಸುವ ಮುನ್ನೆಚ್ಚರಿಕೆ
ಮಹತ್ವದ ಯುದ್ಧ ಪ್ರಯತ್ನ
ಇಸ್ರೇಲಿನಲ್ಲಿ, ಹಲವು ವರ್ಷಗಳಿಂದಲೂ ಈ ಮೀಸಲು ಸೇನೆಯ ಯುದ್ಧ ಸಿದ್ಧತೆ, ಉತ್ಸಾಹ ಮತ್ತು ಆಯುಧಗಳ ಕುರಿತು ಹಲವಾರು ಚಿಂತೆಗಳಿದ್ದವು. ಈ ಕಳವಳಗಳನ್ನು ಆಗಸ್ಟ್ ತಿಂಗಳಲ್ಲಿ ಇಸ್ರೇಲಿ ಸೇನೆಯ ಮಾಜಿ ತನಿಖಾಧಿಕಾರಿ ಮೇಜರ್ ಜನರಲ್ ಯಿಟ್ಜ಼ಕ್ ಬ್ರಿಕ್ ಅವರೂ ವ್ಯಕ್ತಪಡಿಸಿದ್ದರು. ಆ ಸಮಯದಲ್ಲಿ ಅವರು ಮುನ್ಸೂಚನೆ ನೀಡುವಂತೆ ಮಾತನಾಡುತ್ತಾ, "ಇನ್ನು ಮುಂದಿನ ಹಲವು ತಿಂಗಳುಗಳಲ್ಲಿ ಅಥವಾ ಕೆಲವು ವರ್ಷಗಳಲ್ಲಿ ಸಂಭವಿಸಬಹುದಾದ ದೊಡ್ಡ ಯುದ್ಧಕ್ಕೆ ನಾವಿನ್ನೂ ನಮ್ಮ ಸೇನಾಪಡೆಗಳನ್ನು ಸಿದ್ಧಗೊಳಿಸಿಲ್ಲ" ಎಂದಿದ್ದರು. ಅವರು ಇಸ್ರೇಲಿ ಸೇನೆ ಎಂತಹ ಗಂಭೀರ ಪರಿಸ್ಥಿತಿಯನ್ನು ಎದುರಿಸಲೂ ಸಿದ್ಧವಾಗಿರಬೇಕು ಎಂದು ನಂಬಿದ್ದು, 2000 - 2005ನೇ ಇಸವಿಯ ನಡುವೆ ನಡೆದ ಎರಡನೇ ಇಂತಿಫದಾ ದಂತಹ ಸ್ಥಿತಿಯನ್ನು ಎದುರಿಸಲೂ ಸಿದ್ಧವಿರಬೇಕು ಎಂದಿದ್ದರು.
ಈ ಯುದ್ಧದಲ್ಲಿ ಇಸ್ರೇಲ್ ಹೊಂದಿರುವ ಗುರಿಗಳೇನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಹಮಾಸ್ ದಾಳಿಯನ್ನು ತಡೆಗಟ್ಟಲು ವಿಫಲವಾಗಿದೆ ಎಂಬ ಅವಮಾನವನ್ನು ಎದುರಿಸುತ್ತಿರುವ ಇಸ್ರೇಲಿ ಸೇನಾಪಡೆ, ತನ್ನ ಗೌರವವನ್ನು ಮರಳಿ ಗಳಿಸುವ ಗುರಿ ಹೊಂದಿರಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಒಂದು ಬಾರಿ ಇಸ್ರೇಲ್ ಸೇನೆ ಗಾಜಾವನ್ನು ದಾಟಿ, ಗಾಜಾ ಪಟ್ಟಿಯ ಸಮುದ್ರ ತೀರವನ್ನು ತಲುಪಿದ ಬಳಿಕ ಅದರ ಮುಂದಿನ ಹೆಜ್ಜೆಯ ಕುರಿತು ಅನಿಶ್ಚಿತತೆಗಳಿವೆ. ಮೀಸಲು ಪಡೆಗಳನ್ನು ಇದ್ದಕ್ಕಿದ್ದಂತೆ ಕಾರ್ಯಾಚರಣೆಗೆ ಇಳಿಯುವಂತೆ ಮಾಡುವುದು ಇಸ್ರೇಲಿನ ಆರ್ಥಿಕತೆಯ ಮೇಲೆ ಹೊರೆಯಾಗಬಹುದು. ಅದರೊಡನೆ, ಈ ಯುದ್ಧದ ವೆಚ್ಚವೂ 6 ಬಿಲಿಯನ್ ಡಾಲರ್ ದಾಟುವ ನಿರೀಕ್ಷೆಗಳಿವೆ ಎಂದು ಇಸ್ರೇಲಿ ಬ್ಯಾಂಕ್ ಹಪೋವಾಲಿಮ್ ಅಂದಾಜಿಸಿದೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.