ಬೆಂಗಳೂರು : ಅಂಟಾರ್ಕ್‌ಟಿಕಾದ ಅತ್ಯಂತ ಅದ್ಭುತವಾದ, ದುರ್ಗಮ ಒಳನಾಡಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಒಂದು ಕೇಂದ್ರವನ್ನು ಕಾರ್ಯಾಚರಿಸುತ್ತಿದೆ. ಈ ಕೇಂದ್ರ ಬೆಂಗಳೂರು, ಹೈದರಾಬಾದ್‌ಗಳಲ್ಲಿರುವ ಇಸ್ರೋದ ಸಾಮಾನ್ಯ ಕೇಂದ್ರಗಳಿಂದ ಅತ್ಯಂತ ವಿಭಿನ್ನವಾಗಿದೆ. ಯಾಕೆಂದರೆ, ಅಂಟಾರ್ಕ್‌ಟಿಕಾದಲ್ಲಿ ಚಳಿಗಾಲದಲ್ಲಿ ತಾಪಮಾನ -89 ಡಿಗ್ರಿ ಸೆಲ್ಸಿಯಸ್ ತನಕ ಇಳಿಯುವ ಸಾಧ್ಯತೆಗಳಿದ್ದು, ಬೇಸಿಗೆಯಲ್ಲಿ ತಾಪಮಾನ ಅಂದಾಜು -25 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರುತ್ತದೆ.


COMMERCIAL BREAK
SCROLL TO CONTINUE READING

ಎಜಿಇಒಎಸ್ (ಅಂಟಾರ್ಕ್‌ಟಿಕ ಗ್ರೌಂಡ್ ಸ್ಟೇಷನ್ ಫಾರ್ ಅರ್ತ್ ಅಬ್ಸರ್ವೇಶನ್ ಸ್ಯಾಟಲೈಟ್) ಲಾರ್ಸ್‌ಮ್ಯಾನ್ ಹಿಲ್ಸ್ ಪ್ರದೇಶದ ಭಾರತಿ ಕೇಂದ್ರದಲ್ಲಿದ್ದು, ಇದನ್ನು ಆಗಸ್ಟ್ 2013ರಲ್ಲಿ ಉದ್ಘಾಟಿಸಲಾಯಿತು. ಈ ಕೇಂದ್ರ ಬೇಸಿಗೆ ಕಾಲದಲ್ಲಿ 72 ಜನರಿಗೆ ನೆಲೆಸಲು ಅವಕಾಶ ಕಲ್ಪಿಸುತ್ತದೆ.


ಇದನ್ನೂ ಓದಿ: 2023 ಇಸ್ರೋ ಸಾಧನೆಯ ವರ್ಷ: ಭಾರತಕ್ಕೆ ಚಂದ್ರ - ಸೂರ್ಯರ ಅನ್ವೇಷಣೆ, ಗಗನಯಾನ ತಂದ ಹರ್ಷ


ಈ ಕೇಂದ್ರ ಇಸ್ರೋದ ಮಾಹಿತಿ ಸಂಗ್ರಹಣೆ, ಉಪಗ್ರಹ ಸಂಪರ್ಕ (ವಿಶೇಷವಾಗಿ ಧ್ರುವೀಯ ಕಕ್ಷೆಗಳಲ್ಲಿರುವ ಉಪಗ್ರಹಗಳು), ಮತ್ತು ವಾಸ್ತವ ಮಾಹಿತಿ ಪಡೆಯುವಿಕೆ ಮತ್ತು ಸಂಸ್ಕರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದು ಕಾರ್ಟೋಸ್ಯಾಟ್-2 ಸರಣಿ, ಸ್ಕ್ಯಾಟ್‌ಸ್ಯಾಟ್-1, ಮತ್ತು ರಿಸೋರ್ಸ್‌ಸ್ಯಾಟ್-2/2ಎ ಥರದ ವಿವಿಧ ಇಂಡಿಯನ್ ರಿಮೋಟ್ ಸೆನ್ಸಿಂಗ್ (ಐಆರ್‌ಎಸ್) ಉಪಗ್ರಹಗಳಿಗೆ ಬೆಂಬಲ ಒದಗಿಸುತ್ತದೆ. ಈ ಮೂಲಕ ಸಂಗ್ರಹಿಸಲಾದ ಮಾಹಿತಿಗಳನ್ನು ಬಳಿಕ ಸುಗಮವಾಗಿ ಹೈದರಾಬಾದ್ ಬಳಿಯ ಶಾದ್‌ನಗರ್‌ನಲ್ಲಿರುವ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್‌ಗೆ (ಎನ್ಆರ್‌ಎಸ್‌ಸಿ) ಕಳುಹಿಸಲಾಗುತ್ತದೆ. ಇದು ಭಾರತದ ಭೂ ವೀಕ್ಷಣಾ (ಅರ್ತ್ ಅಬ್ಸರ್ವೇಷನ್ - ಇಒ) ಯೋಜನೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.


ಅಂಟಾರ್ಕ್‌ಟಿಕಾ ಖಂಡಕ್ಕೆ ಯಾಕೆ ಮಹತ್ವ?


ಈ ಕೇಂದ್ರ ಅಂಟಾರ್ಕ್‌ಟಿಕದಲ್ಲಿ ಇರುವುದು ಒಂದು ರೀತಿಯಲ್ಲಿ ವಿಶಿಷ್ಟವಾದ ಕಾರ್ಯತಂತ್ರದ ಮೇಲುಗೈಯನ್ನು ಒದಗಿಸುತ್ತದೆ. ಈ ಕೇಂದ್ರ ಪ್ರತಿ ದಿನವೂ ಸಂಚರಿಸುವ ಬಹುತೇಕ 10 ಉಪಗ್ರಹಗಳ ವೀಕ್ಷಣೆ ನಡೆಸುತ್ತದೆ. ಆ ಮೂಲಕ ಕೃಷಿ, ಜಲ ಸಂಪನ್ಮೂಲ ನಿರ್ವಹಣೆ, ನಗರ ಯೋಜನೆ, ಪ್ರಕೃತಿ ವಿಕೋಪ ಪರಿಹಾರ, ಮತ್ತಿತರ ಉದ್ದೇಶಗಳಿಗೆ ಅವಶ್ಯಕವಾದ ವ್ಯಾಪಕ ಮಾಹಿತಿ ಕಲೆಹಾಕಲು ಸಾಧ್ಯವಾಗುತ್ತದೆ.


'10 ಉಪಗ್ರಹಗಳ ವೀಕ್ಷಣೆ' ಎಂದರೆ, ಈ ಭೂಕೇಂದ್ರ ಒಂದು ದಿನದಲ್ಲಿ ಮೇಲಿನಿಂದ ಹತ್ತು ಬಾರಿಯ ತನಕ ಸಂಚರಿಸುವ ಉಪಗ್ರಹಗಳೊಡನೆ ಸಂವಹನ ನಡೆಸುವ, ಅಥವಾ ಮಾಹಿತಿ ಸಂಗ್ರಹಿಸುವ ಸಾಮರ್ಥ್ಯವಾಗಿದೆ. ಪ್ರತಿಯೊಂದು ಬಾರಿ ದಾಟಿ ಹೋಗುವುದೆಂದರೆ, ಉಪಗ್ರಹ ಭೂ ಕೇಂದ್ರದ ಉಪಕರಣಗಳ ವ್ಯಾಪ್ತಿಯ ಬಳಿ ಸಂಚರಿಸಿ, ಮಾಹಿತಿ ಸಂಗ್ರಹಿಸಲು ಅನುವು ಮಾಡುವುದಾಗಿದೆ. ಈ ರೀತಿ ಹೆಚ್ಚು ಬಾರಿ ಸಂವಹನ ನಡೆಸುವುದು ಪಾರಿಸರಿಕ ಬದಲಾವಣೆಗಳು, ನೈಸರ್ಗಿಕ ಸಂಪನ್ಮೂಲಗಳ ವೀಕ್ಷಣೆ, ಅಥವಾ ಹವಾಮಾನ ಮಾದರಿಗಳ ಮಾಹಿತಿ ಸಂಗ್ರಹಿಸಲು ಅನುಕೂಲ ಕಲ್ಪಿಸುತ್ತದೆ.


ಈ ಭೂ ಕೇಂದ್ರವನ್ನು ದಕ್ಷಿಣ ಧ್ರುವಕ್ಕೆ ಸಮೀಪದಲ್ಲಿರುವ ಕಾರಣದಿಂದ ಅಂಟಾರ್ಕ್‍ಟಿಕದಲ್ಲಿ ಉದ್ದೇಶಪೂರ್ವಕವಾಗಿ ಸ್ಥಾಪಿಸಲಾಗಿದೆ. ಈ ಸ್ಥಾನ ಧ್ರುವೀಯ ಕಕ್ಷೆಗಳಲ್ಲಿರುವ ಉಪಗ್ರಹಗಳ ಹೆಚ್ಚಿನ ವೀಕ್ಷಣೆ ನಡೆಸಲು ಮತ್ತು ಪ್ರತಿದಿನವೂ ಹತ್ತು ಬಾರಿಯಷ್ಟು ಮಾಹಿತಿ ಸಂಗ್ರಹಿಸಲು ಅನುಕೂಲಕರವಾಗಿದೆ.


ಧ್ರುವೀಯ ಕಕ್ಷೆಗಳಲ್ಲಿ ಸಂಚರಿಸುವ ಉಪಗ್ರಹಗಳು ಭೂಮಿಗೆ ಪ್ರದಕ್ಷಿಣೆ ನಡೆಸುತ್ತಾ, ದಿನವೊಂದಕ್ಕೆ ಹಲವಾರು ಬಾರಿ ಧ್ರುವಗಳ ಬಳಿ ಸಂಚರಿಸುತ್ತವೆ. ಅಂಟಾರ್ಕ್‌ಟಿಕ ಖಂಡದ ಭೂ ಕೇಂದ್ರ ದಕ್ಷಿಣ ಧ್ರುವಕ್ಕೆ ಸನಿಹದಲ್ಲಿರುವುದರಿಂದ, ಈ ಕೇಂದ್ರಕ್ಕೆ ಬೇರೆ ಹೆಚ್ಚು ಎತ್ತರದ ಪ್ರದೇಶಗಳಲ್ಲಿರುವ ಭೂ ಕೇಂದ್ರಗಳಿಂದಲೂ ಹೆಚ್ಚು ಉಪಗ್ರಹಗಳ ಸಂಚಾರವನ್ನು ಸೆರೆಹಿಡಿಯಲು ಸಾಧ್ಯವಾಗುತ್ತದೆ.


ಇದನ್ನೂ ಓದಿ:  ಉಡಾವಣೆಗೆ ಸಿದ್ಧವಾದ ಎಕ್ಸ್‌ಪೋಸ್ಯಾಟ್: ಕ್ಷ ಕಿರಣಗಳ ಅಧ್ಯಯನದಿಂದ ಬ್ರಹ್ಮಾಂಡದ ರಹಸ್ಯ ಅನಾವರಣ 


ಉಪಗ್ರಹ ಸಂಚಾರಗಳ ಸಂಖ್ಯೆ ಹೆಚ್ಚಾದಷ್ಟೂ ಭೂ ಕೇಂದ್ರದ ಮಾಹಿತಿ ಸಂಗ್ರಹಣಾ ಸಾಮರ್ಥ್ಯವೂ ಹೆಚ್ಚಾಗುತ್ತದೆ. ಇದು ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ನೆರವು ನೀಡುತ್ತದೆ.


ಎಜಿಇಒಎಸ್‌ನ ಇತರ ಕಾರ್ಯಗಳೇನು?


ಎಜಿಇಒಎಸ್ ಹೊಂದಿರುವ ಎಸ್/ಎಕ್ಸ್/ಕೆಎ ಆ್ಯಂಟೆನಾ ವ್ಯವಸ್ಥೆ ಇಸ್ರೋದ ರಿಮೋಟ್ ಸೆನ್ಸಿಂಗ್ ಯೋಜನೆಗಳಿಗೆ ಮಹತ್ತರವಾಗಿದ್ದು,  ಈ ಕ್ಷೇತ್ರದಲ್ಲಿ ಭಾರತದ ಪ್ರಾವೀಣ್ಯತೆಯನ್ನು ಹೆಚ್ಚಿಸುತ್ತದೆ.


ಮೂರು ಬ್ಯಾಂಡ್‌ಗಳ ಬಳಕೆ ನಡೆಸುವುದರಿಂದ, ಇಸ್ರೋದ ವ್ಯವಸ್ಥೆ ಇತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗಳಿಂದ ಭಿನ್ನವಾಗಿದ್ದು, ತನ್ನದೇ ಆದ ಪ್ರತ್ಯೇಕ ವರ್ಗದಲ್ಲಿದೆ. ಪ್ರತಿಯೊಂದು ಆವರ್ತನದ ಬ್ಯಾಂಡ್ ಪ್ರತ್ಯೇಕ ಗುಣಲಕ್ಷಣಗಳು ಮತ್ತು ಬಳಕೆಗಳನ್ನು ಹೊಂದಿದ್ದು, ಎಲ್ಲ ಮೂರು ಬ್ಯಾಂಡ್‌ಗಳ ಬಳಕೆ ಮಾಡುವುದರಿಂದ, ಇಸ್ರೋಗೆ ವಿಶಾಲ ವ್ಯಾಪ್ತಿಯ ರಿಮೋಟ್ ಸೆನ್ಸಿಂಗ್ ಮತ್ತು ಸಂವಹನಾ ಸಾಮರ್ಥ್ಯ ಲಭಿಸಿ, ಜಾಗತಿಕ ಬಾಹ್ಯಾಕಾಶ ಸಮುದಾಯದಲ್ಲಿ ಇಸ್ರೋದ ಸ್ಥಾನವನ್ನು ಹೆಚ್ಚಿಸುತ್ತದೆ.


• ಎಸ್ ಬ್ಯಾಂಡ್ ಅನ್ನು ಬಾಹ್ಯಾಕಾಶ ನೌಕೆ, ಹವಾಮಾನ ರೇಡಾರ್, ಮತ್ತು ಮೊಬೈಲ್ ಫೋನ್ ಮತ್ತು ವೈಫೈ ಸೇರಿದಂತೆ ಕೆಲವು ವಿಧದ ಮೊಬೈಲ್ ಸಂವಹನಗಳಿಗೆ ಬಳಸಲಾಗುತ್ತದೆ.


• ಎಕ್ಸ್ ಬ್ಯಾಂಡ್ ಪ್ರಾಥಮಿಕವಾಗಿ ರೇಡಾರ್ ಅಪ್ಲಿಕೇಷನ್ಸ್, ಉಪಗ್ರಹ ಸಂವಹನ, ಬಾಹ್ಯಾಕಾಶ ಟೆಲಿಮೆಟ್ರಿ, ಮತ್ತು ನಿರ್ದಿಷ್ಟ ರೇಡಾರ್ ಆಧಾರಿತ ಹವಾಮಾನ ವಿಚಕ್ಷಣೆ ಮತ್ತು ರಕ್ಷಣಾ ವ್ಯವಸ್ಥೆಗಳಲ್ಲಿ ಬಳಕೆಯಾಗುತ್ತದೆ.


• ಕೆಎ ಬ್ಯಾಂಡ್ ಅನ್ನು ಹೆಚ್ಚಿನ ಸಾಮರ್ಥ್ಯದ ಉಪಗ್ರಹ ಸಂವಹನ, ಹೈ ರೆಸಲ್ಯೂಷನ್ ರೇಡಾರ್, ಬಾಹ್ಯಾಕಾಶ ಸಂಶೋಧನೆ, ಮತ್ತು ಅತ್ಯಂತ ವೇಗದ ಉಪಗ್ರಹ ಅಂತರ್ಜಾಲ ಸೇವೆಗಳಿಗೆ ಬಳಕೆಯಾಗುತ್ತದೆ.


ಭಾರತಿ ಕೇಂದ್ರದಲ್ಲಿ ಕಾರ್ಯಾಚರಿಸುವ ಇಸ್ರೋ ಇಂಜಿನಿಯರ್‌ಗಳ ತಂಡ ಇಸ್ರೋದ ರಿಮೋಟ್ ಸೆನ್ಸಿಂಗ್ ಯೋಜನೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ.


ಉಪಗ್ರಹ ಉಡಾವಣೆಗಳ ಸಂಖ್ಯೆ ಮತ್ತು ಕಕ್ಷೆಯಲ್ಲಿರುವ ಉಪಗ್ರಹಗಳ ಸಂಖ್ಯೆ ಹೆಚ್ಚುತ್ತಿರುವಂತೆ, ಭೂ ಕೇಂದ್ರಗಳ ಸಂಖ್ಯೆಯೂ ಮಿತಿಯಲ್ಲಿರುವುದರಿಂದ, ಈ ಕೇಂದ್ರ ಹೆಚ್ಚು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ. ಈ ಕೇಂದ್ರದಲ್ಲಿರುವ ಆ್ಯಂಟೆನಾಗಳ ಸಹಾಯದಿಂದ, ಪಿಎಸ್ಎಲ್‌ವಿ ಮೂಲಕ ನಡೆಸುವ ಉಡಾವಣೆಗಳನ್ನು ಗಮನಿಸಲು ಸಾಧ್ಯವಾಗುತ್ತದೆ.


ಎಜಿಇಒಎಸ್ ಪ್ರಾಥಮಿಕವಾಗಿ ಇಸ್ರೋದ ರಿಮೋಟ್ ಸೆನ್ಸಿಂಗ್ ಯೋಜನೆಗಳಿಗೆ ನೆರವಾಗುತ್ತದಾದರೂ, ಇದು ಭಾರತದ ಗೋವಾದಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಅಂಟಾರ್ಕ್‍ಟಿಕ ಆ್ಯಂಡ್ ಓಶನ್ ರಿಸರ್ಚ್ (ಎನ್‌ಸಿಎಒಆರ್) ಸಿ ಬ್ಯಾಂಡ್ ಸ್ಟೇಷನ್ ಅನ್ನು ಒಳಗೊಂಡಿದೆ. ಈ ಕೇಂದ್ರ ಒಂದು ವಿಶೇಷ ಸಂವಹನ ಮಾಧ್ಯಮವಾಗಿ ಕಾರ್ಯಾಚರಿಸಿ, ನಿರಂತರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ನೆರವಾಗುತ್ತದೆ. ಇದು ವೀಡಿಯೋ ಕಾನ್ಫರೆನ್ಸಿಂಗ್, ಲೈವ್ ಸ್ಟ್ರೀಮಿಂಗ್, ಮತ್ತು ವೆಬ್ ಬ್ರೌಸಿಂಗ್‌ಗೆ ಬೆಂಬಲ ನೀಡುತ್ತದೆ.


ಭಾರತ ಈಗಾಗಲೇ ಒಂದು ಅತ್ಯಾಧುನಿಕ ಕೆಎ ಬ್ಯಾಂಡ್ ಉಪಗ್ರಹ ಲಿಂಕ್‌ಗಾಗಿ ಗುತ್ತಿಗೆ ಆರಂಭಿಸಿದ್ದು, ಇದು ಸಂಪರ್ಕ ವ್ಯವಸ್ಥೆ ಮತ್ತು ಅತ್ಯಂತ ವೇಗವಾದ ಮಾಹಿತಿ ವರ್ಗಾವಣಾ ಸಾಮರ್ಥ್ಯ ಹೊಂದಿರುವ ಉಪಗ್ರಹ ಅಂತರ್ಜಾಲ ವ್ಯವಸ್ಥೆಗಳನ್ನು ಒದಗಿಸಲಿದೆ. ಈ ಯೋಜನೆಯು ಬಹಳಷ್ಟು ಮಹತ್ವದ್ದಾಗಿದ್ದು, ಇದು ಮುಂಬರುವ, ಭಾರತೀಯ ಮತ್ತು ಅಮೆರಿಕನ್ ವಿಜ್ಞಾನಿಗಳ ಜಂಟಿ ಯೋಜನೆಯಾದ, ನಾಸಾ - ಇಸ್ರೋ ಸಿಂತೆಟಿಕ್ ಅಪರ್ಚರ್ ರೇಡಾರ್ (NISAR) ಬಾಹ್ಯಾಕಾಶ ಯೋಜನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಈ ಯೋಜನೆ, ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳ ಕುರಿತು ವಿವರಣೆ ಒದಗಿಸುವ ಮಂಜಿನ ಪದರುಗಳು ಮತ್ತು ಹೆಚ್ಚುತ್ತಿರುವ ಸಮುದ್ರ ಮಟ್ಟದ ಕುರಿತು ಅಪಾರ ಪ್ರಮಾಣದ ಮಾಹಿತಿಗಳನ್ನು ಕಲೆಹಾಕುತ್ತದೆ. ಈ ಯೋಜನೆಯಿಂದ ಲಭ್ಯವಾಗುವ ಮಾಹಿತಿಗಳು ಪ್ರತಿದಿನವೂ ಕನಿಷ್ಠ ಪಕ್ಷ 80 ಟೆರಾಬೈಟ್‌ಗಳಿಂದಲೂ ಹೆಚ್ಚಿರುತ್ತದೆ ಎನ್ನಲಾಗಿದೆ. ಇಷ್ಟು ಅಪಾರ ಪ್ರಮಾಣದ ಮಾಹಿತಿಗಳನ್ನು ಕೆಎ ಬ್ಯಾಂಡ್ ಸ್ಯಾಟಲೈಟ್ ಲಿಂಕ್ ನಿರ್ವಹಿಸಲಿದೆ.


ತನ್ನ ಪ್ರಮುಖ ಪಾತ್ರಗಳ ಹೊರತಾಗಿ, ಈ ಕೇಂದ್ರ ಅಂಟಾರ್ಕ್‌ಟಿಕ ಖಂಡದಲ್ಲಿರುವ ಭಾರತದ ಇನ್ನೊಂದು ಸಂಶೋಧನಾ ಕೇಂದ್ರವಾದ ಮೈತ್ರಿಯಲ್ಲಿ ಸಂಶೋಧನೆ ನಡೆಸುವ ಭಾರತೀಯ ವೈಜ್ಞಾನಿಕ ಸಮುದಾಯಕ್ಕೂ ನೆರವಾಗುತ್ತದೆ. ಜಗತ್ತಿನ ಅತ್ಯಂತ ಕಠಿಣವಾದ ಮತ್ತು ಅತ್ಯಂತ ದುರ್ಗಮ ಪ್ರದೇಶವಾದ ಅಂಟಾರ್ಕ್‌ಟಿಕ ಖಂಡದಲ್ಲಿ ಅಪಾರ ಪ್ರಮಾಣದ ಮೂಲಭೂತ ಸೌಲಭ್ಯ ಸಾಧಿಸಿರುವುದು, ಜಾಲಬಂಧದ ಸಂಪರ್ಕ ಹೊಂದಿ, ವೈಜ್ಞಾನಿಕ ಅನ್ವೇಷಣೆಗಳನ್ನು ನಡೆಸುವುದು ಭಾರತದ ಬದ್ಧತೆಯನ್ನು ಪ್ರದರ್ಶಿಸುತ್ತಿದೆ.


ಎಜಿಇಒಎಸ್ ಅನ್ನು ಭಾರತಿ ಕೇಂದ್ರದಲ್ಲಿರುವ ಇಸ್ರೋ ಇಂಜಿನಿಯರ್‌ಗಳ ತಂಡ ನಿರಂತರವಾಗಿ ಕಾರ್ಯಾಚರಿಸುವಂತೆ ನೋಡಿಕೊಳ್ಳುತ್ತದೆ. ಅವರು ಈ ತಂತ್ರಜ್ಞಾನ ನಿರಂತರವಾಗಿ ಕಾರ್ಯಾಚರಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆಯನ್ನು ಗಮನಿಸಿ, ನಿರ್ವಹಿಸಿ, ಯಾವುದೇ ಸಮಸ್ಯೆ ಬಂದರೆ ಪರಿಹರಿಸುತ್ತಾರೆ.


ಅಂಟಾರ್ಕ್‍ಟಿಕದ ಭಾರತಿ ಕೇಂದ್ರದಲ್ಲಿ ಇತ್ತೀಚೆಗೆ ಕೆಎ ಬ್ಯಾಂಡ್ ಅಳವಡಿಸಿರುವುದು ಭಾರತದ ರಿಮೋಟ್ ಸೆನ್ಸಿಂಗ್ ಸಾಮರ್ಥ್ಯವನ್ನು ವೃದ್ಧಿಸಿ, ನಂಬಿಕಾರ್ಹ ಅಂತರ್ಜಾಲ ವ್ಯವಸ್ಥೆಯ ಮೂಲಕ ದಕ್ಷಿಣ ಧ್ರುವದಲ್ಲಿರುವ ಭಾರತದ ಮೈತ್ರಿ ಕೇಂದ್ರಕ್ಕೆ ಇತರ ಕೇಂದ್ರಗಳೊಡನೆ ಉತ್ತಮ ಸಂಪರ್ಕ ಒದಗಿಸುತ್ತದೆ. ಇದು ಮಂಜುಗಡ್ಡೆಯ ಖಂಡವಾದ ಅಂಟಾರ್ಕ್‌ಟಿಕ ಮತ್ತು ಭಾರತದ ಮುಖ್ಯಭೂಮಿಯ ನಡುವೆ ಸಂವಹನ ಮತ್ತು ವೈಜ್ಞಾನಿಕ ಸಹಕಾರವನ್ನು ವೃದ್ಧಿಸಲು ಮಹತ್ವದ ಹೆಜ್ಜೆಯಾಗಿದೆ.


ಲೇಖಕರು : ಗಿರೀಶ್ ಲಿಂಗಣ್ಣ (ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.