ಎಮಿಸ್ಯಾಟ್ ಉಡಾವಣೆ ಯಶಸ್ವಿ: ಇನ್ಮುಂದೆ ಆಗಸದಿಂದ ಉಗ್ರರನ್ನು ಟ್ರ್ಯಾಕ್ ಮಾಡಲಿದೆ ಭಾರತ!
ಪಿಎಸ್ ಎಲ್ ವಿ-ಸಿ45 ರಾಕೆಟ್ ಮೂಲಕ ಡಿಆರ್ ಡಿಒ ಅಭಿವೃದ್ಧಿ ಪಡಿಸಿದ ಎಮಿಸ್ಯಾಟ್ ಹೊಸ ರೂಪಾಂತರವು ವಿದ್ಯುನ್ಮಾನ ಗುಪ್ತಚರ ಉಪಗ್ರಹವನ್ನು ಹೊಂದಿದೆ.
ಚೆನ್ನೈ: ಅಂತರಿಕ್ಷ ಜಗತ್ತಿನಲ್ಲಿ ಇತಿಹಾಸ ಸೃಷ್ಟಿಸಿರುವ ಭಾರತ ಇಂದು ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ 28 ವಿದೇಶಿ ನ್ಯಾನೊ ಉಪಗ್ರಹಗಳೊಂದಿಗೆ ಭಾರತದ ಎಮಿಸ್ಯಾಟ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ISRO ನ ಮೂರನೆಯ ತಲೆಮಾರಿನ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ಮೂಲಕ ಉಪಗ್ರಹವನ್ನು ಶ್ರೀಹರಿಕೋಟಾದಿಂದ ನಭದತ್ತ ಹಾರಿಸಲಾಗಿದೆ. ಇಂದು ಬೆಳಿಗ್ಗೆ 9.27ಕ್ಕೆ ಆಂಧ್ರಪ್ರದೇಶದ ಶ್ರೀಹರಿ ಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಸಂಶೋಧನಾ ಕೇಂದ್ರದಿಂದ ಇದನ್ನು ಉಡಾವಣೆ ಮಾಡಲಾಯಿತು.
ಇದನ್ನು ರಕ್ಷಣಾ ಉದ್ದೇಶಗಳಿಗೆ ಬಳಸಲಾಗುತ್ತದೆ. ಶತ್ರು ರಾಷ್ಟ್ರಗಳ ನೆಲೆಗಳಲ್ಲಿರುವ ರೇಡಾರ್ ಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯವಿರುವ ಎಮಿಸ್ಯಾಟ್ ಉಪಗ್ರಹ ಉಗ್ರರ ಮೇಲೆ ಕಣ್ಣಿಡಲು ಸಹಾಯ ಮಾಡುತ್ತದೆ ಮತ್ತು ಎಚ್ಚರಿಕೆ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
ಭಾರತೀಯ ಪಿಎಸ್ ಎಲ್ ವಿ-ಸಿ45 ರಾಕೆಟ್ ಮೂಲಕ ಡಿಆರ್ ಡಿಒ ಅಭಿವೃದ್ಧಿ ಪಡಿಸಿದ ಎಮಿಸ್ಯಾಟ್ ಹೊಸ ರೂಪಾಂತರವು ವಿದ್ಯುನ್ಮಾನ ಗುಪ್ತಚರ ಉಪಗ್ರಹವನ್ನು ಹೊಂದಿದೆ. ಡಿಆರ್ ಡಿಒ ರೂಪಿಸಿರುವ 436 ಕೆ.ಜಿ. ತೂಕದ 'ಎಮಿಸ್ಯಾಟ್' ಉಪಗ್ರಹಕ್ಕೆ ವಿದ್ಯುತ್ಕಾಂತೀಯ ಅಲೆಗಳ ಕ್ಷೇತ್ರ ವಿಶ್ಲೇಷಣೆಯ ಸಾಮರ್ಥ್ಯವಿದೆ.
ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್ ಸೆಟಲೈಟ್ ಸೇರಿದಂತೆ ಅಮೆರಿಕದ 24, ಸ್ವಿರ್ಟ್ಜರ್ ಲೆಂಡ್ ನ 01, ಸ್ಪೇನ್ 1, ಲಿಥುಯೇನಿಯಾದ 02 ಹೊತ್ತೊಯ್ದಿರುವ ಪಿಎಸ್ ಎಲ್ ವಿ-ಸಿ45, 763 ಕಿ.ಮೀ. ಅಂತರದ ಕಕ್ಷೆಯಲ್ಲಿ ತನ್ನ ಮೊದಲ ಉಪಗ್ರಹವನ್ನು ನೆಲೆಗೊಳಿಸಲಿದ್ದು, 3 ಕಕ್ಷೆಗಳಲ್ಲಿ ಈ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ.