ಹೈದರಾಬಾದ್: ಇಲ್ಲಿನ ಅಪಾರ್ಟ್ಮೆಂಟ್ ವೊಂದರಲ್ಲಿ ಭಾರತೀಯ ಬಾಹ್ಯಾಕಾಶ ಸಂಸೋಧನಾ ಸಂಸ್ಥೆ(ಇಸ್ರೋ) ವಿಜ್ಞಾನಿ ಕೊಲೆಯಾಗಿರುವುದು ಪತ್ತೆಯಾಗಿದೆ. ಆತನ ತಲೆಗೆ ತೀವ್ರ ಪೆಟ್ಟಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಎನ್‌ಆರ್‌ಎಸ್‌ಸಿ ಅಧಿಕಾರಿಯಾದ  ಎಸ್.ಸುರೇಶ್(56) ಎಂಬವರು ಹೈದರಾಬಾದ್‌ನ ಅಮೀರ್‌ಪೇಟ್‌ನಲ್ಲಿರುವ ಅನ್ನಪೂರ್ಣ ಅಪಾರ್ಟ್ಮೆಂಟ್ ನಲ್ಲಿರುವ ಅವರ ಫ್ಲ್ಯಾಟ್‌ನಲ್ಲಿ ಮಂಗಳವಾರ ಕೊಲೆಯಾಗಿರುವುದು ಪತ್ತೆಯಾಗಿದೆ. ಮೃತ ವಿಜ್ಞಾನಿ ಅವರ ಮನೆಗೆ ನುಗ್ಗಿ ದುಷ್ಕರ್ಮಿಗಳು ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


ಕೇರಳ ಮೂಲದವರಾದ ಸುರೇಶ್, ತಮ್ಮ ಫ್ಲಾಟ್ ನಲ್ಲಿ ಒಬ್ಬರೇ ವಾಸವಿದ್ದರು. ಮನಗಳವಾರ ಕಚೇರಿಗೆ ಆಗಮಿಸದಿರುವುದನ್ನು ಗಮನಿಸಿ ಸಹೋದ್ಯೋಗಿಯೊಬ್ಬರು ಅವರ ಮೊಬೈಲ್ ಗೆ ಕರೆ ಮಾಡಿದ್ದರು. ಆದರೆ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಚೆನ್ನೈನಲ್ಲಿ ಬ್ಯಾಂಕ್ ಉದ್ಯೋಗಿಯಾಗಿರುವ ಅವರ ಪತ್ನಿ ಇಂದಿರಾ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು ಎನ್ನಲಾಗಿದೆ. 


ಬಳಿಕ ಹೈದರಾಬಾದ್ ಗೆ ಆಗಮಿಸಿದ ಪತ್ನಿ ಮತ್ತವರ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿ, ಮನೆಯ ಬಾಗಿಲು ಮುರಿದು ಪರಿಶೀಲಿಸಿದಾಗ ವಿಜ್ಞಾನಿ ಸುರೇಶ್ ಅವರು, ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ. 


ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದು, ಘಟನಾ ಸ್ಥಳದಲ್ಲಿ ಹೆಚ್ಚಿನ ಸುಳಿವುಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರಕರಣದ ಹೆಚ್ಚಿನ ತನಿಖೆಗಾಗಿ ಅಪಾರ್ಟ್ಮೆಂಟ್ ಸಂಕೀರ್ಣದ ಸಿಸಿಟಿವಿ ದೃಶ್ಯಾವಳಿಗಳನ್ನೂ ಸಹ ಸ್ಕ್ಯಾನ್ ಮಾಡಲಾಗುತ್ತಿದೆ.