ಹೊಸ ದಿನಾಂಕ ಪ್ರಕಟಿಸಿದ ಇಸ್ರೋ; ಜುಲೈ 22ಕ್ಕೆ ಚಂದ್ರಯಾನ-2 ಉಡಾವಣೆ
ಜುಲೈ 22ರ ಮುಂಜಾನೆ 2.43ಕ್ಕೆ ಚಂದ್ಉರಯಾನ-2 ಉಡಾವಣೆಯಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಗುರುವಾರ ಟ್ವೀಟ್ ಮೂಲಕ ತಿಳಿಸಿದೆ.
ನವದೆಹಲಿ: ತಾಂತ್ರಿಕ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿದ್ದಇಸ್ರೋದ ಬಹುನಿರೀಕ್ಷಿತ 'ಚಂದ್ರಯಾನ-2' ಉಡಾವಣೆಗೆ ಹೊಸ ದಿನಾಂಕ ಪ್ರಕಟಿಸಲಾಗಿದ್ದು, ಜುಲೈ 22ರ ಮುಂಜಾನೆ 2.43ಕ್ಕೆ ಉಡಾವಣೆಯಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಗುರುವಾರ ಟ್ವೀಟ್ ಮೂಲಕ ತಿಳಿಸಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟದ ಬಾಹ್ಯಾಕಾಶ ಕೇಂದ್ರದಿಂದ ಜುಲೈ 15ರ ಮುಂಜಾನೆ 2:51 ಕ್ಕೆ ಚಂದ್ರಯಾನ -2 ಉಡಾವಣೆಯಾಗಬೇಕಿತ್ತು. ಆದರೆ ಜಿಎಸ್ಎಲ್ವಿ ಮಾರ್ಕ್-3ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ಉಡಾವಣೆಯನ್ನು ಸ್ಥಗಿತಗೊಳಿಸಿ ಮುಂದೂಡಲಾಗಿತ್ತು.
2008ರಲ್ಲಿ ಪ್ರಾರಂಭವಾದ ಇಸ್ರೋದ ಚಂದ್ರಯಾನ್-1 ರ ಅನುಸರಣೆಯಾದ ಚಂದ್ರಯಾನ್-2 ಚಂದ್ರನ ಮೂಲ ಮತ್ತು ವಿಕಾಸವನ್ನು ಅರ್ಥಮಾಡಿಕೊಳ್ಳುವ ಬಗ್ಗೆ ವಿವರವಾದ ಅಧ್ಯಯನವನ್ನು ಕೈಗೊಳ್ಳುವ ಗುರಿ ಹೊಂದಿದೆ.
ಚಂದ್ರಯಾನ 2 ಉಪಗ್ರಹ 3,850 ಕೆ.ಜಿ. ತೂಕ ಹೊಂದಿದ್ದು, ಆರ್ಬಿಟರ್ ತೂಕ 2,379, ಲ್ಯಾಂಡರ್ 1,471 ಕೆ.ಜಿ., ರೋವರ್ 27 ಕೆ.ಜಿ. ಹೊಂದಿವೆ. ಸುಮಾರು 978 ಕೋಟಿ ರೂ. ವೆಚ್ಚದಲ್ಲಿ ಚಂದ್ರಯಾನ-2 ಯೋಜನೆ ಸಿದ್ಧಗೊಂಡಿದ್ದು, ಉಪಗ್ರಹಕ್ಕೆ 603 ಕೋಟಿ ರೂ., ರಾಕೆಟ್‍ಗೆ 375 ಕೋಟಿ ರೂ. ವೆಚ್ಚವಾಗಿದೆ. 3 ಹಂತದ ಜಿಎಸ್‍ಎಲ್‍ವಿ ಮಾರ್ಕ್-3 ರಾಕೆಟ್‍ನಲ್ಲಿ ಈ ಉಪಗ್ರಹ ಉಡಾವಣೆಯಾಗಲಿದ್ದು, ಶೇ.32 ರಷ್ಟು ಮಹಿಳಾ ವಿಜ್ಞಾನಿಗಳು ಭಾಗಿಯಾಗಿದ್ದಾರೆ ಎಂಬುದು ವಿಶೇಷ.