ಇದು ಕಾರ್ಪೊರೇಟ್ ಗಳ ಪರವಾಗಿರುವ ಬಜೆಟ್- ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಕೇಂದ್ರ ಸರ್ಕಾರವು ಮಂಡಿಸಿರುವ ಈ ಸಾಲಿನ ಬಜೆಟ್ ಕಾರ್ಪೋರೇಟ್ ಪರವಾಗಿದೆ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್ಸಿನ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸರ್ಕಾರದ ಬಜೆಟ್ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡಿಸಿದ ನಂತರ, ನವದೆಹಲಿಯಲ್ಲಿ ಪತ್ರಕರ್ತರಿಗೆ ಪ್ರತಿಕ್ರಯಿಸಿರುವ ಖರ್ಗೆ ಕಾರ್ಪೊರೇಟ್ ಪರ ಇಲ್ಲ ಎನ್ನುವ ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆ ಕಡಿತ ಮಾಡುವ ಮೂಲಕ ಪರೋಕ್ಷವಾಗಿ ಉದ್ಯಮಿಗಳಿಗೆ ಲಾಭ ಮಾಡುತ್ತಿದೆ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಇನ್ನು ಮುಂದುವರೆದು ಮಾತನಾಡಿದ ಅವರು ಈ ಬಜೆಟ್ ನಲ್ಲಿ 2019ಕ್ಕೆ ನೆರವಾಗುವ ಯಾವುದೇ ಅಂಶಗಳಿಲ್ಲ ಇದು ಪ್ರಮುಖವಾಗಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ ಎಂದರು. ಕಳೆದ ನಾಲ್ಕು ವರ್ಷಗಳಲ್ಲಿ ಏನನ್ನೂ ಮಾಡದ ಸರ್ಕಾರ ಈ ಒಂದು ವರ್ಷದಲ್ಲಿ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ಕಳೆದ ಸಾರಿ ಬಜೆಟ್ ನಲ್ಲಿ ಮಂಡಿಸಿದ್ದ ಬಹುತೇಕ ಯೋಜನೆಗಳು ಇನ್ನು ಪೂರ್ಣವಾಗಿಲ್ಲ, ಮತ್ತು ರೈತರ ಆಧಾಯ ದ್ವಿಗುಣಗೊಳಿಸುತ್ತೇವೆ ಎನ್ನುವ ಸರ್ಕಾರದ ಭರವಸೆಗಳೆಲ್ಲ ಸುಳ್ಳು ಎಂದು ಅವರು ಅಭಿಪ್ರಾಯಪಟ್ಟರು.
ಶಿಕ್ಷಣದ ವಿಚಾರವಾಗಿ ಪ್ರಸ್ತಾಪಿಸಿದ ಖರ್ಗೆ ಪ್ರಾಥಮಿಕ ಶಿಕ್ಷಣಕ್ಕೆ ಸಮರ್ಪಕವಾದ ಅನುಧಾನವನ್ನು ನೀಡಿಲ್ಲ, ಇನ್ನು ಉನ್ನತ ಶಿಕ್ಷಣಕ್ಕೆ ನೀಡಿರುವ ಹಣವಂತು ಕೇವಲ ಉನ್ನತ ವರ್ಗದ ಮಕ್ಕಳಿಗೆ ಪ್ರಯೋಜನಕಾರಿಯಾಗಲಿದೆ ಎಂದರು. ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ನನ್ನು ಸೇರಿಸಿರುವುದರಿಂದ ಸಾಮಾನ್ಯ ಜನರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ತಿಳಿಸಿದರು