ಚೆನ್ನೈ : ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಪೋಯಿಸ್ ಗಾರ್ಡನ್ ನಿವಾಸದ ಮೇಲೆ ಕಳೆದ ರಾತ್ರಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 


COMMERCIAL BREAK
SCROLL TO CONTINUE READING

ದಾಳಿ ನಡೆಸಲು ಹೈಕೋರ್ಟ್ ಅನುಮತಿ ಪಡೆದಿದ್ದ ಐಟಿ ಅಧಿಕಾರಿಗಳು ರಾತ್ರಿ ಸುಮಾರು 9 ಗಂಟೆಗೆ ಭಾರೀ ಬಿಗಿ ಭದ್ರತೆಯೊಂದಿಗೆ ಪೋಯಸ್ ಗಾರ್ಡನ್ ನಲ್ಲಿರುವ ಜಯ ಅವರ 'ವೇದ ನಿಲಯಂ' ನಿವಾಸದ ಮೇಲೆ ದಾಳಿ ನಡೆಸಿದರು. ಜಯಲಲಿತಾ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಪೂನಾಗುಂದ್ರನ್ ಅವರ ಕೋಣೆ, ರೆಕಾರ್ಡ್ ಕೊಠಡಿ ಮತ್ತು ಶಶಿಕಲಾ ಬಳಸಿದ ಇತರ ಕೊಠಡಿಯನ್ನು ಪರಿಶೀಲಿಸಿದ್ದಾರೆ ಎಂದು ಮಾಹಿತಿ ಲಭಿಸಲಿದೆ.


ಇದೇ ಸಂದರ್ಭದಲ್ಲಿ ಎಐಎಡಿಎಂಕೆ ಕಾರ್ಯಕರ್ತರು ಜಯಾ ನಿವಾಸದ ಮೇಲೆ ಐಟಿ ದಾಳಿ ಖಂಡಿಸಿ ನಿವಾಸದ ಮುಂದೆ ಐಟಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. 


21 ವರ್ಷಗಳ ನಂತರ ಜಯಲಲಿತಾ ಅವರ ಪೋಯಿಸ್ ಗಾರ್ಡನ್ ನಿವಾಸದ ಮೇಲೆ ಐಟಿ ದಾಳಿ ನಡೆದಿದ್ದು, ಈ ಹಿಂದೆ ಭ್ರಷ್ಟಾಚಾರದ ಆರೋಪದ ಮೇಲೆ 1996ರ ಡಿಸೆಂಬರ್ 7 ರಂದು ಐಟಿ ಅಧಿಕಾರಿಗಳು ದಾಳಿ ನಡೆಸಿ 5 ದಿನಗಳ ಕಾಲ ಪರಿಶೀಲನೆ ನಡೆಸಿದ್ದರು. 


ನ.09 ರಂದು, ಜಯಾ ಟಿವಿ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಅವರ ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು ಒಂದು ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಗದು, ಚಿನ್ನ, ಮೌಲ್ಯಯುತ ದಾಖಲೆಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದರು. ಜಯಲಲಿತಾ ಅವರ ಸಾವಿನ ಬಳಿಕ ಶಶಿಕಲಾ ಕುಟುಂಬ ಪೋಯಸ್ ಗಾರ್ಡನ್ ನಿವಾಸದಲ್ಲಿ ವಾಸವಾಗಿತ್ತು.