ಆಂಧ್ರಪ್ರದೇಶ ಸಿಎಂ ಆಗಿ ಪ್ರಮಾಣವಚನ ಹಿನ್ನೆಲೆ; ಪ್ರಧಾನಿ ಮೋದಿ ಭೇಟಿಯಾದ ಜಗನ್
ನವದೆಹಲಿಯ ಲೋಕಮಾನ್ಯ ರಸ್ತೆಯಲ್ಲಿರುವ ಪ್ರಧಾನಿ ಮೋದಿ ನಿವಾಸಕ್ಕೆ ತೆರಳಿದ ಜಗನ್, ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ಎರಡನೇ ಅವಧಿಗೆ ಪ್ರಧಾನಿಯಾಗಿರುವ ಮೋದಿಗೆ ಹೂಗುಚ್ಚ ನೀಡಿ, ಓಂ ನಮಃ ಶಿವಾಯ ಎಂದು ಬರೆದಿರುವ ಶಾಲು ಹೊದಿಸಿ ಅಭಿನಂದಿಸಿದರು.
ನವದೆಹಲಿ: ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ವೈಎಸ್ಆರ್ ಕಾಂಗ್ರೆಸ್ ನಾಯಕ ಜಗನ್ ಮೋಹನ್ ರೆಡ್ಡಿ ಮೇ.30ರಂದು ಪ್ರಮಾಣವಚನ ಸ್ವಿಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಗನ್ ಮೋಹನ್ ರೆಡ್ಡಿ ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ನವದೆಹಲಿಯ ಲೋಕಮಾನ್ಯ ರಸ್ತೆಯಲ್ಲಿರುವ ಪ್ರಧಾನಿ ಮೋದಿ ನಿವಾಸಕ್ಕೆ ತೆರಳಿದ ಜಗನ್, ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ಎರಡನೇ ಅವಧಿಗೆ ಪ್ರಧಾನಿಯಾಗಿರುವ ಮೋದಿಗೆ ಹೂಗುಚ್ಚ ನೀಡಿ, ಓಂ ನಮಃ ಶಿವಾಯ ಎಂದು ಬರೆದಿರುವ ಶಾಲು ಹೊದಿಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಚುನಾವಣೆಯಲ್ಲಿ ಗೆಲುವಿನ ಬಗ್ಗೆ ಮಾತುಕತೆ ನಡೆಸಿದ ಜಗನ್, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಈ ಬಾರಿ ಆಂಧ್ರಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ನಡೆದ ಚುನಾವಣೆ ನಡೆದಿತ್ತು. ಆಂಧ್ರಪ್ರದೇಶದ 25 ಲೋಕಸಭಾ ಸ್ಥಾನಗಳ ಪೈಕಿ 22 ಸ್ಥಾನಗಳನ್ನು ಗೆದ್ದುಕೊಂಡಿದ್ದ ವೈಎಸ್ಆರ್ ಕಾಂಗ್ರೆಸ್ ಪಕ್ಷ, 175 ವಿಧಾನಸಭಾ ಕ್ಷೇತ್ರಗಳ ಪೈಕಿ 151 ಸ್ಥಾನಗಳನ್ನು ತನ್ನದಾಗಿಸಿಕೊಂಡು ಪ್ರಚಂಡ ಗೆಲುವು ಸಾಧಿಸಿದೆ. ಉಳಿದಂತೆ ಟಿಡಿಪಿ 23 ಹಾಗೂ ಪವನ್ ಕಲ್ಯಾಣ್ ಅವರ ಜನಸೇನಾ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿವೆ. ಈ ವೈಎಸ್ಆರ್ ಕಾಂಗ್ರೆಸ್ ಪಕ್ಷ ಆಂಧ್ರದಲ್ಲಿ ನೂತನ ಸರ್ಕಾರ ರಚನೆ ಮಾಡಲಿದ್ದು, ಜಗನ್ ಅವರು ವಿಜಯವಾಡದಲ್ಲಿ ನಡೆಯುವ ಸಮಾರಂಭದಲ್ಲಿ ಮೇ 30ರಂದು ಮಧ್ಯಾಹ್ನ 12.23ಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.