ರೋಹ್ಟಕ್: ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್(Jaish-e-Mohammed) ಶನಿವಾರ ಮಧ್ಯಾಹ್ನ 3: 30 ಕ್ಕೆ ರೋಹ್ಟಕ್ ಜಂಕ್ಷನ್ (Rohtak Railway junction‌) ನಿಲ್ದಾಣ ಅಧೀಕ್ಷಕ ಯಶ್ಪಾಲ್ ಮೀನಾ ಅವರ ಕಚೇರಿಗೆ ಒಂದು ಮೇಲ್ ಕಳುಹಿಸಿದ್ದು, ಅಕ್ಟೋಬರ್ 8 ದಸರಾ ದಿನದಂದು ಆರು ರಾಜ್ಯಗಳ 10 ರೈಲ್ವೆ ನಿಲ್ದಾಣಗಳು ಮತ್ತು ದೇವಾಲಯಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ.


COMMERCIAL BREAK
SCROLL TO CONTINUE READING

ರೋಹ್ಟಕ್ ಜಂಕ್ಷನ್, ರೇವಾರಿ, ಹಿಸಾರ್, ಕುರುಕ್ಷೇತ್ರ, ಮುಂಬೈ ನಗರ, ಬೆಂಗಳೂರು, ಚೆನ್ನೈ, ಜೈಪುರ, ಭೋಪಾಲ್, ಕೋಟಾ, ಇಟಾರ್ಸಿ ರೈಲ್ವೆ ನಿಲ್ದಾಣಗಳು ಮತ್ತು ರಾಜಸ್ಥಾನ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಹರಿಯಾಣ ಸೇರಿದಂತೆ ಆರು ರಾಜ್ಯಗಳ ದೇವಾಲಯಗಳನ್ನು ಗುರಿಯಾಗಿಸುವುದಾಗಿ ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ. 


ಈ ವಿಷಯವನ್ನು ತಕ್ಷಣವೇ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಉಲ್ಲೇಖಿಸಲಾಗಿರುವ ರೈಲ್ವೆ ನಿಲ್ದಾಣಗಳಲ್ಲಿ ರೈಲುಗಳು ಮತ್ತು ಪ್ಲಾಟ್‌ಫಾರ್ಮ್‌ಗಳ ಪರಿಶೀಲನೆಗೆ ಜಿಆರ್‌ಪಿ ಮತ್ತು ಆರ್‌ಪಿಎಫ್ ಸಿಬ್ಬಂದಿಯನ್ನು ಹೆಚ್ಚಿಸಲಾಗಿದೆ.


ರೈಲ್ವೆ ನಿಲ್ದಾಣದ ಅಧೀಕ್ಷಕ ಯಶ್ಪಾಲ್ ಮೀನಾ ಅವರಿಗೆ ಮಸೂದ್ ಅಹ್ಮದ್ ಎಂಬ ವ್ಯಕ್ತಿ ಈ ಪತ್ರವನ್ನು ಬರೆದಿದ್ದಾರೆ. ಇದರಲ್ಲಿ ಆತ ತಾನು ಜೈಶ್-ಎ-ಮೊಹಮ್ಮದ್ ಸಂಘಟನೆಯ ಜಮ್ಮು ಮತ್ತು ಕಾಶ್ಮೀರದ ಕಮಾಂಡರ್ ಎಂದು ಎಂದು ಬಣ್ಣಿಸಿಕೊಂಡಿದ್ದಾನೆ. 


"ನಾವು ಖಂಡಿತವಾಗಿಯೂ ನಮ್ಮ ಜಿಹಾದಿಗಳ ಸಾವಿಗೆ ಪ್ರತೀಕಾರ ತೀರಿಸುತ್ತೇವೆ. ಈ ಬಾರಿ ನಾವು ಭಾರತ ಸರ್ಕಾರವನ್ನು ಸ್ಫೋಟಿಸುತ್ತೇವೆ. ಅಕ್ಟೋಬರ್ 8 ರಂದು ರೇವಾರಿ, ರೋಹ್ಟಕ್, ಹಿಸಾರ್, ಕುರುಕ್ಷೇತ್ರ, ಬಾಂಬೆ ನಗರ, ಚೆನ್ನೈ, ಬೆಂಗಳೂರು, ಭೋಪಾಲ್, ಜೈಪುರ, ಕೋಟಾ, ಇಟಾರ್ಸಿ ರೈಲ್ವೆ ನಿಲ್ದಾಣಗಳು ಇತ್ಯಾದಿಗಳು ರಾಜಸ್ಥಾನ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ, ಯುಪಿ, ಹರಿಯಾಣ ಸೇರಿದಂತೆ ಭಾರತದ ಅನೇಕ ರಾಜ್ಯಗಳಲ್ಲಿನ ರೈಲ್ವೆ ನಿಲ್ದಾಣಗಳು ಮತ್ತು ದೇವಾಲಯಗಳಲ್ಲಿ ಬಾಂಬ್ ಸ್ಫೋಟಿಸಲಿದ್ದೇವೆ. ಸುತ್ತಲೂ ರಕ್ತ ಕಾಣಿಸುತ್ತದೆ. ಖುದಾ ಹಫೀಜ್" ಎಂದು ಪತ್ರದಲ್ಲಿ ಬರೆಯಲಾಗಿದೆ.


ಪತ್ರವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಲಾಗಿದೆ. ಅದೇ ಸಮಯದಲ್ಲಿ ನಿಲ್ದಾಣಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಆದೇಶ ಹೊರಡಿಸಲಾಗಿದೆ ಎಂದು ಹೇಳಲಾಗಿದೆ.