ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ವಿವಿಧ ಕಡೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇವೆ.  ದೆಹಲಿಯ ಶಾಹೀನ್ ಬಾಗ್ ನಲ್ಲಿ ಕಳೆದ ೨೦ ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ. ದೆಹಲಿ ಅಷ್ಟೇ ಅಲ್ಲ ದೇಶದ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಪ್ರತಿಪಕ್ಷಗಳು ಈ ಕಾನೂನನ್ನು ಸರ್ಕಾರ ಹಿಂಪಡೆಯಬೇಕು ಎಂಬ ಪಟ್ಟು ಹಿಡಿದಿವೆ. ಇನ್ನೊಂದೆಡೆ ಈ ಪ್ರತಿಭಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ, ಯಾವುದೇ ಪರಿಸ್ಥಿತಿಯಲ್ಲಿ ಈ ಕಾನೂನನ್ನು ಹಿಂಪಡೆಯಲಾಗುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾನಲ್ಲಿ ಈ ಕಾಯ್ದೆಗೆ ವಿರೋಧಿಸಿದ್ದ ವಿದ್ಯಾರ್ಥಿಗಳು ಡಿಸೆಂಬರ್ ನಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯ ಭಾಗವಾಗಿ ವಿದ್ಯಾರ್ಥಿಗಳು ಮಾರ್ಚ್ ಹಮ್ಮಿಕೊಂಡಿದ್ದರು. ನೋಡುತ್ತಲೇ ಈ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿತ್ತು. ಬಳಿಕ ಪೊಲೀಸರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, ವಿಶ್ವವಿದ್ಯಾಲಯದ ಆವರಣದಲ್ಲಿ ವಾಹನಗಳ ಮೇಲೆ ಹಲ್ಲೆ ನಡೆಸಿ, ಗುಂಡು ಹಾರಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಆರಂಭದಲ್ಲಿ ಗುಂಡು ಹಾರಿಸಲಾಗಿದೆ ಎಂಬ ಆರೋಪವನ್ನು ಒಪ್ಪಿಕೊಳ್ಳದ ದೆಹಲಿ ಪೊಲೀಸರು ಇದೀಗ ಈ ಆರೋಪವನ್ನು ಒಪ್ಪಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಹೇಳಿಕೆ ನೀಡಿರುವ ದೆಹಲಿ ಪೊಲೀಸರು ಪ್ರತಿಭಟನೆಯ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡುಹಾರಿಸಿದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಇದುವರೆಗೆ ನಡೆದ ತನಿಖೆಯಲ್ಲಿ ಪೊಲೀಸರು ಹಾರಿಸಿದ ಗುಂಡುಗಳು ಯಾವುದೇ ವಿದ್ಯಾರ್ಥಿಗಳಿಗೆ ತಗುಲಿಲ್ಲ ಎಂದು ಹೇಳಲಾಗಿದೆ. ಪೊಲೀಸರು ಗುಂಡು ಹಾರಿಸಿದ ಕುರಿತು ಬೆಳಕಿಗೆ ಬಂದ ವಿಡಿಯೋ ನೈಜತೆಯಿಂದ ಕೂಡಿದ್ದು, ಈ ವಿಡಿಯೋ ಮಥುರಾ ರೋಡಗೆ ಸಂಬಧಿಸಿದ ವಿಡಿಯೋ ಆಗಿದೆ ಎನ್ನಲಾಗಿದೆ.  ವಿಡಿಯೋನಲ್ಲಿ ಫೈರಿಂಗ್ ನಡೆಸುತ್ತಿರುವ ಪೊಲೀಸರು ತಮ್ಮ ಆತ್ಮರಕ್ಷಣೆಗೆ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ ಎಂದು ಪೊಲೀಸರು ಒಪ್ಪಿಕೊಂಡಿದ್ದಾರೆ. ಪೊಲೀಸರು ಫೈರಿಂಗ್ ನಡೆಸುತ್ತಿದ್ದ ವೇಳೆ ಅಲ್ಲಿ ವ್ಯಾಪಕವಾಗಿ ಕಲ್ಲುತೂರಾಟ ನಡೆಯುತ್ತಿದ್ದು ಹಾಗೂ ಪ್ರತಿಭಟನಾಕಾರರು ಪೋಲೀಸರನ್ನು ನಾಲ್ಕು ದಿಕ್ಕುಗಳಿಂದ ಸುತ್ತುವರೆದಿದ್ದರು ಎಂದಿದ್ದಾರೆ.


ಪೊಲೀಸರು ಗುಂಡು ಹಾರಿಸುತ್ತಿರುವ ಈ ವಿಡಿಯೋ ಡಿಸೆಂಬರ್ 15ಕ್ಕೆ ವೈರಲ್ ಆಗಿತ್ತು. ಈ ಫೈರಿಂಗ್ ಕುರಿತು ಪೊಲೀಸರು ತಮ್ಮ ಡೆಲಿ ಡೈರಿಯಲ್ಲಿಯೂ ಕೂಡ ನಮೂದಿಸಿದ್ದಾರೆ. ಜಾಮಿಯಾನಲ್ಲಿ ನಡೆದ ಹಿಂಸಾಚಾರದ ವೇಳೆ ಸುಮಾರು ಎರಡು ಡಜನ್ ಗೂ ಅಧಿಕ ಪೊಲೀಸರು ಉಪಕುಲಪತಿ ಹಾಗೂ ಚೀಫ್ ಪ್ರಾಕ್ಟರ್ ಅನುಮತಿಯನ್ನು ಪಡೆಯದೇ ವಿವಿ ಆವರಣಕ್ಕೆ ನುಸುಳಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದು , ಈ ಹಲ್ಲೆಗಳ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಜಾಮಿಯಾ ಉಪಕುಲಪತಿ ನಜ್ಮಾ ಅಖ್ತರ್ ಈ ಪ್ರಕರಣದಲ್ಲಿ ದೆಹಲಿ ಪೊಲೀಸ ಅಧಿಕಾರಿಗಳ ವಿರುದ್ಧ FIR ದಾಖಲಿಸಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.