ಭದ್ರತಾಪಡೆಗಳ ಜೊತೆಗಿನ ಮುಖಾಮುಖಿಯಲ್ಲಿ ನಾಲ್ವರು ಉಗ್ರರ ಹತ್ಯೆ, ಮುಂದುವರೆದ ಶೋಧ ಕಾರ್ಯಾಚರಣೆ
ನಗರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರ: ಜಮ್ಮು-ಮತ್ತು ಕಾಶ್ಮೀರದಲ್ಲಿ ಉಗ್ರರ ಜೊತೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ನಾಲ್ವರು ಉಗ್ರರರನ್ನು ಮಟ್ಟಹಾಕಲಾಗಿದೆ. ನಗರದ ಜುನಿಮಾರ್ ಪ್ರಾಂತ್ಯದಲ್ಲಿ ಉಗ್ರರು ಅವಿತುಕೊಂಡಿದ್ದಾರೆ ಎಂಬ ಗುಪ್ತಚರ ಇಲಾಖೆಯ ಮಾಹಿತಿಯ ಹಿನ್ನೆಲೆ ಭದ್ರತಾಪಡೆಗಳು ಈ ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಪೊಲೀಸ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ವೇಳೆ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಭದ್ರತಾಪಡೆಗಳು ಎನ್ಕೌಂಟರ್ ನಲ್ಲಿ ನಾಲ್ವರು ಭಯೋತ್ಪಾದಕರನ್ನು ಮಟ್ಟಹಾಕಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಇದುವರೆಗೂ ಕೂಡ ಶೋಧ ಕಾರ್ಯ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ. ಈ ಶೋಧ ಕಾರ್ಯಾಚರಣೆಯ ವೇಳೆ ಭಯೋತ್ಪಾದರಿಗೆ ಶರಣಾಗುವಂತೆ ಪೊಲೀಸರು ಅವರ ಕುಟುಂಬ ಸದಸ್ಯರಿಗೆ ಮನವಿ ಮಾಡಿದ್ದಾರೆ. ಆದರೆ, ಇದರಲ್ಲಿ ಅವರ ಕುಟುಂಬ ಸದಸ್ಯರು ವಿಫಲವಾದ ಹಿನ್ನೆಲೆ ಎನ್ಕೌಂಟರ್ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತ
ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲಿನ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ನಗರದ ಪ್ರಮುಖ ಭಾಗಗಳಲ್ಲಿ ಸಂಚಾರದ ಮೇಲೆಯೂ ಕೂಡ ನಿಬಂಧನೆ ವಿಧಿಸಲಾಗಿದೆ.
ಕಳೆದ 20 ದಿನಗಳಲ್ಲಿ 36 ಉಗ್ರರನ್ನು ಮಟ್ಟಹಾಕಲಾಗಿದೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಒಂದು ವರ್ಷದಿಂದ ನಡೆಸಲಾಗುತ್ತಿರುವ ಉಗ್ರವಿರೋಧಿ ಅಭಿಯಾನದಲ್ಲಿ 110ಕ್ಕೂ ಅಧಿಕ ಉಗ್ರರನ್ನು ಹತ್ಯೆಗೈಯಲಾಗಿದೆ. ಕಳೆದ 20 ದಿನಗಳಲ್ಲಿ ಭದ್ರತಾ ಪಡೆಯ ಯೋಧರು ಸುಮಾರು 36 ಉಗ್ರರನ್ನು ಮಟ್ಟಹಾಕಿದ್ದಾರೆ ಎಂಬುದು ಇಲ್ಲಿ ಗಮನಾರ್ಹ. ಈ ಕುರಿತು ಮಾಹಿತಿ ನೀಡಿರುವ ಜಮ್ಮು ಮತ್ತು ಕಾಶ್ಮೀರದ ಪೋಲೀಸ್ ಮಹಾನಿರ್ದೇಶಕ ದಿಲಬಾಗ್ ಸಿಂಗ್, ಮಟ್ಟಹಾಕಲಾಗಿರುವ ಈ ಎಲ್ಲ ಉಗ್ರರು ಲಷ್ಕರ್-ಎ-ತೊಯ್ಬಾ, ಜೈಷ್-ಎ-ಮೊಹಮ್ಮದ್ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದವರಾಗಿದ್ದಾರೆ. ಹತಾಶೆಗೊಂಡಿರುವ ಈ ಉಗ್ರರು ಇದೀಗ ಸಾಮಾನ್ಯ ನಾಗರಿಕರನ್ನು ಗುರಿಯಾಗಿಸುತ್ತಿದ್ದಾರೆ ಎಂದು ಹೇಳಿದ್ದಾರೆ.