ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೇಡ್ ಸ್ಫೋಟ: ಶಂಕಿತ ಆರೋಪಿ ಬಂಧನ
ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೇಡ್ ಎಸೆದು ಪರಾರಿಯಾಗಿದ್ದ ಯಾಸಿರ್ ಭಟ್ ಎಂಬಾತನನ್ನುಪೊಲೀಸರು ಬಂಧಿಸಿದ್ದಾರೆ.
ಶ್ರೀನಗರ: ಜಮ್ಮು ಬಸ್ ನಿಲ್ದಾಣದಲ್ಲಿ ಸಂಭವಿಸಿದ ಗ್ರೆನೇಡ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ಶಂಕಿತ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ಮುಂದುವರೆಸಿದ್ದಾರೆ. ಬಂಧಿತ ಆರೋಪಿ ಕುಲ್ವಾಮಾ ನಿವಾಸಿ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಐಜಿಪಿ ಮನೀಷ್ ಕೆ. ಸಿನ್ಹಾ, ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೇಡ್ ಎಸೆದು ಪರಾರಿಯಾಗಿದ್ದ ಯಾಸಿರ್ ಭಟ್ ಎಂಬಾತನನ್ನು ಬಂಧಿಸಲಾಗಿದ್ದು, ಆತನಿಗೆ ಹಿಜ್ಬುಲ್ ಕಮಾಂಡರ್ ಫಾರೂಕ್ ಅಹಮದ್ ಭಟ್ ಉರುಫ್ ಒಮರ್ ಈ ಕೆಲಸವನ್ನು ವಹಿಸಿದ್ದಾಗಿ ತಿಳಿದು ಬಂದಿದ್ದು, ಗ್ರೆನೇಡ್ ದಾಳಿ ನಡೆಸಲು ಯಾಸಿರ್ ಬೆಳಿಗ್ಗೆಯೇ ಜಮ್ಮುಗೆ ಬಂದಿದ್ದ ಎಂದು ತಿಳಿಸಿದ್ದಾರೆ.
ಕಳೆದ ವರ್ಷದ ಮೇನಿಂದಾಚೆಗೆ ಜಮ್ಮು ಬಸ್ ನಿಲ್ದಾಣದಲ್ಲಿ ಉಗ್ರರು ನಡೆಸಿರುವ ಮೂರನೇಯ ಗ್ರೆನೇಡ್ ಸ್ಪೋಟ ಇದಾಗಿದೆ.ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಗೆ ಭಂಗ ತರುವಂತಹ ನಿಟ್ಟಿನಲ್ಲಿ ಈ ಸ್ಪೋಟ ನಡೆಸಿರುವ ಸಾಧ್ಯತೆ ಎಂಬುದು ತಿಳಿದುಬಂದಿದೆ.
ಬಾಲಕೋಟ್ನಲ್ಲಿ ಭಾರತೀಯ ವಾಯುಪಡೆಯು ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿದ ಬೆನ್ನಹಿಂದೆಯೇ ಇಂದು ಮಧ್ಯಾಹ್ನ ಜಮ್ಮು ಬಸ್ ನಿಲ್ದಾಣದಲ್ಲಿ ನಡೆದ ಸ್ಫೋಟದಲ್ಲಿ ಈವರೆಗೆ ಓರ್ವ ಸಾವಿಗೀಡಾಗಿದ್ದು, 30 ಮಂದಿ ಗಾಯಗೊಂಡಿದ್ದಾರೆ. ಕೇಂದ್ರ ಸರ್ಕಾರವು ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಐದು ಲಕ್ಷ ರೂ. ಹಾಗೂ ಗಾಯಾಳುಗಳಿಗೆ 20 ಸಾವಿರ ರೂ. ಪರಿಹಾರ ಘೋಷಿಸಿದೆ.