ಮೋದಿ ಸರ್ಕಾರದ ಹಗರಣಗಳಿಗೆ `ಜನ್ ಧನ್ ಲೂಟ್ ಯೋಜನಾ` ಎಂದ ರಾಹುಲ್!
ನೀರವ್ ಮೋದಿ ಪ್ರಕರಣದ ಬೆನ್ನಲ್ಲೇ ದೆಹಲಿ ಮೂಲದ ವಜ್ರ ಮಾರಾಟ ಕಂಪನಿಯೊಂದರ ಸಾಲ ವಂಚನೆ ಪ್ರಕರಣ ವರದಿಯಾದ ಕೂಡಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿ: ನೀರವ್ ಮೋದಿ ಪ್ರಕರಣದ ಬೆನ್ನಲ್ಲೇ ದೆಹಲಿ ಮೂಲದ ವಜ್ರ ಮಾರಾಟ ಕಂಪನಿಯೊಂದರ ಸಾಲ ವಂಚನೆ ಪ್ರಕರಣ ವರದಿಯಾದ ಕೂಡಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರದ 'ಪ್ರಧಾನ ಮಂತ್ರಿ ಜನ್ ಧನ್ ಯೋಜನೆ'ಯನ್ನು, "ದೆಹಲಿ ಮೂಲದ ಆಭರಣ ವ್ಯಾಪಾರಿಯ 390 ಕೋಟಿ ರೂ. ಹಗರಣವು ಮೋದಿ ಜೀ ಅವರ ಅಧಿಕಾರವಧಿಯಲ್ಲಿ ನಡೆದಿರುವ ಮತ್ತೊಂದು ಹಗರಣ, ಅದೇ 'ಜನ್ ಧನ್ ಲೂಟ್ ಯೋಜನಾ'! ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್, ನಕಲಿ ಪತ್ರಗಳನ್ನು ಬಳಸುವುದರ ಮೂಲಕ ಈ ಹಿಂದೆ ನಡೆದ ವಂಚನೆ ಪ್ರಕರಣಗಳಂತೆಯೇ 390 ಕೋಟಿ ರೂಪಾಯಿಗಳ ವಂಚನೆ ನಡೆದಿದೆ. ಬಹುಶಃ ಈ ಪ್ರಕರಣದ ಆರೋಪಿಗಳು ಕೂಡ ದೇಶದಿಂದ ಪಲಾಯನ ಮಾಡಿರಬಹುದು ಎಂದು ಹೇಳಿದ್ದಾರೆ. "ನಿರವ್ ಮೋದಿ, ಮಲ್ಯ ಅವರಂತೆಯೇ ಇವರೂ ಕೂಡ ಕಣ್ಮರೆಯಾಗಿದ್ದಾರೆ ಎಂದು ಹೇಳಿದ್ದಾರೆ.
ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದ ಬೆನ್ನಲ್ಲೇ, ಕರೋಲ್ಭಾಗ್'ನ ಮತ್ತೋರ್ವ ವಜ್ರದ ವ್ಯಾಪಾರಿ ದ್ವಾರಕಾ ದಾಸ್ ಸೇಠ್ ಎಂಬವರು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್'ನಲ್ಲಿ ಸುಮಾರು 389 ಕೋಟಿ ರೂ ಸಾಲ ಪಡೆದು ಅದನ್ನು ಮರುಪಾವತಿಸದೆ ವಂಚಿಸಿದ್ದಾರೆ ಎಂದು ಆರೋಪಿಸಿ ದ್ವಾರಕಾ ದಾಸ್ ಸೇಠ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ರಾಹುಲ್ ಈ ಟ್ವೀಟ್ ಮಾಡಿದ್ದಾರೆ.
ಈ ಪ್ರಕರಣದ ಸಂಬಂಧ ಸಂಸ್ಥೆಯ ನಿರ್ದೇಶಕರುಗಳಾದ ಸಭ್ಯಾ ಸೇಟ್, ರೀಟಾ ಸೇಟ್, ಕೃಷ್ಣ ಕುಮಾರ್ ಸಿಂಗ್, ರವಿಸಿಂಗ್ ಸೇರಿದಂತೆ ಕಂಪನಿಯ ಇತರರ ವಿರುದ್ಧವೂ ದೂರು ದಾಖಲಿಸಲಾಗಿದೆ. ಜತೆಗೆ, ದ್ವಾರಕಾ ದಾಸ್ ಸೇಠ್ ಸಂಸ್ಥೆಯ ಸಹೋದರ ಸಂಸ್ಥೆ ಎನ್ನಲಾಗುತ್ತಿರುವ ದ್ವಾರಕಾ ದಾಸ್ ಸೇಠ್ ಎಸ್ ಇಎಜ್ ಇನ್ ಕಾರ್ಪೋರೇಷನ್ ಸಂಸ್ಥೆ ವಿರುದ್ಧವೂ ಸಿಬಿಐ ದೂರು ದಾಖಲಿಸಿದ್ದು, ತನಿಖೆ ಆರಂಭಿಸಿದೆ.