VIDEO: ಇವಿಎಂ ಯಂತ್ರವನ್ನು ನೆಲಕ್ಕೆಸೆದ ಜನಸೇನಾ ನಾಯಕನ ಬಂಧನ
ಇವಿಎಂ ಯಂತ್ರವನ್ನು ನೆಲಕ್ಕೆ ಎತ್ತಿ ಹಾಕಿದ್ದರಿಂದ ಜನಸೇನಾ ನಾಯಕ ಮಧುಸೂದನ್ ಗುಪ್ತಾರನ್ನು ಪೊಲೀಸರು ಬಂಧಿಸಿದ್ದಾರೆ.
ಅಮರಾವತಿ: 2019ರ ಲೋಕಸಭಾ ಚುನಾವಣೆಗೆ ಇಂದು ಮೊದಲ ಹಂತದ ಮತದಾನ ನಡೆಯುತ್ತಿದ್ದು, ಆಂಧ್ರ ಪ್ರದೇಶದಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ಮತದಾನದ ವೇಳೆ ಕಂಡ ಲೋಪದೋಷದಿಂದ ಕುಪಿತಗೊಂಡ ಜನಸೇನಾ ಪಕ್ಷದ ಅಭ್ಯರ್ಥಿ ಮಧುಸೂದನ್ ಗುಪ್ತಾ ಇವಿಎಂ ಯಂತ್ರವನ್ನು ನೆಲಕ್ಕೆಸೆದು ಹಾನಿಗೊಳಿಸಿದ ಪರಿಣಾಮ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ 25 ಲೋಕಸಭಾ ಕ್ಷೇತ್ರಗಳು ಮತ್ತು 175 ವಿಧಾನಸಭೆ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯುತ್ತಿದೆ. ಈ ವೇಳೆ ಅನಂತಪುರ ಜಿಲ್ಲೆಯ ಗುಂತಕಲ್ ವಿಧಾನಸಭೆ ಕ್ಷೇತ್ರದಲ್ಲಿ ಮತದಾನಕ್ಕೆಂದು ತೆರಳಿದ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷದ ಅಭ್ಯರ್ಥಿ ಇವಿಎಂ ಯಂತ್ರಕ್ಕೆ ಹಾನಿಯುಂಟುಮಾಡಿದ ಪರಿಣಾಮ ಅವರನ್ನು ಬಂಧಿಸಲಾಗಿದೆ.
ಚುನಾವಣಾ ನಿಯಮಗಳ ಪ್ರಕಾರ ಇವಿಎಂನಲ್ಲಿ ಮೊದಲಿಗೆ ಜನಸೇನಾ ಪಕ್ಷದ ಅಭ್ಯರ್ಥಿಯ ಹೆಸರನ್ನು ಮುದ್ರಿಸಬೇಕಿತ್ತು. ಆದರೆ ಚುನಾವಣಾ ಅಧಿಕಾರಿಗಳು ವೈಎಸ್ಆರ್ ಕಾಂಗ್ರೆಸ್ ಹಾಗೂ ಟಿಡಿಪಿ ಅಭ್ಯರ್ಥಿಗಳ ಹೆಸರನ್ನು ಮೊದಲಿಗೆ ಮುದ್ರಿಸಿದ್ದಾರೆ. ಅಲ್ಲದೆ, ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳ ಹೆಸರು ಸರಿಯಾಗಿ ಕಾಣಿಸುತ್ತಿಲ್ಲ. ಮಾತ್ರವಲ್ಲ ವೈಎಸ್ಆರ್ ಕಾಂಗ್ರೆಸ್ ಹಾಗೂ ಟಿಡಿಪಿ ಹೊರತುಪಡಿಸಿ ಬೇರೆ ಅಭ್ಯರ್ಥಿಗಳ ಚಿಹ್ನೆಯನ್ನು ಸಹ ಅಸ್ಪಷ್ಟವಾಗಿ ಮುದ್ರಿಸಲಾಗಿದೆ ಎನ್ನುವ ವಿಚಾರವಾಗಿ ಮಧುಸೂದನ್ ಮತದಾನದ ಸಿಬ್ಬಂದಿಯೊಂದಿಗೆ ವಾಗ್ವಾಕ್ಕಿಳಿದಿದ್ದಾರೆ.
ಈ ವೇಳೆ ಕೆಂಡಾಮಂಡಲರಾದ ಮಧುಸೂದನ್ ಇವಿಎಂ ಯಂತ್ರವನ್ನು ನೆಲಕ್ಕೆಸೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇದರಿಂದ ಇವಿಎಂ ಯಂತಕ್ಕೆ ಹಾನಿಯಾಗಿದ್ದು, ಮಧುಸೂದನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ಅನಂತಪುರ ಜಿಲ್ಲಾ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.