ರಾಂಪುರ: ಲೋಕಸಭಾ ಚುನಾವಣೆಯಲ್ಲಿ ರಾಂಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಜಯಪ್ರದಾ ಬುಧವಾರ ನಾಮಪತ್ರ ಸಲ್ಲಿಸಿದರು. ಬಳಿಕ ಸಾರ್ವಜನಿಕ ಸಭೆಯಲ್ಲಿ ಕ್ಷೇತ್ರದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಳೆಯ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ ಕಣ್ಣೀರಿಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ರಾಂಪುರ ಕ್ಷೇತ್ರವನ್ನು ಬಿಟ್ಟು ಹೋಗಲು ನಾನು ಬಯಸಿರಲಿಲ್ಲ. ಕಾರಣ ಇಲ್ಲಿ ಬಡವರ ಮೇಲಾಗುತ್ತಿದ್ದ ದಬ್ಬಾಳಿಕೆಯನ್ನು ನಿಲ್ಲಿಸಬೇಕಿತ್ತು. ಆದರೆ, ನಾನು ರಾಂಪುರವನ್ನು ಬಿಟ್ಟು ಹೋಗುವಂತೆ ಸಾಕಷ್ಟು ಪ್ರಯತ್ನ ನಡೆಸಲಾಗಿತ್ತು. ಅದಕ್ಕಾಗಿ ನನ್ನ ಮೇಲೆ ಆಸಿಡ್ ದಾಳಿಯ ಸಂಚು ನಡೆದಿತ್ತು. ಆದರೆ ಇಂದು ಬಿಜೆಪಿ ನನ್ನೊಂದಿಗೆ ನಿಂತಿದೆ. ನೀವು ನನ್ನೊಂದಿಗಿದ್ದು, ನನಗೆ ಬಲ ತುಂಬಿದ್ದೀರಿ. ಆದ್ದರಿಂದ ನಾನು ಮತ್ತೆ ಇದೇ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಭಾವುಕರಾಗಿ ನುಡಿದರು.



1994 ರಲ್ಲಿ ಎನ್.ಟಿ.ರಾಮರಾವ್ ತೆಲುಗುದೇಶಂ ಪಕ್ಷದೊಂದಿಗೆ ರಾಜಕೀಯ ಪ್ರವೇಶಿಸಿ ಆಂಧ್ರಪ್ರದೇಶದಿಂದ ರಾಜ್ಯಸಭೆ ಎಂಪಿಯಾಗಿ ಆಯ್ಕೆಯಾದ ಜಯಪ್ರದಾ, ಸಮಾಜವಾದಿ ಪಕ್ಷದ ಟಿಕೆಟ್ ನಿಂದಲೇ 2004 ಮತ್ತು 2009ರಲ್ಲಿ ಎರಡು ಬಾರಿ ರಾಂಪುರದ ಸಂಸದೆಯಾಗಿ ಲೋಕಸಭೆ ಪ್ರವೇಶಿಸಿದ್ದರು. ಆದರೆ, 2010ರಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಜತೆಗಿನ ಕಿತ್ತಾಟದಿಂದಾಗಿ ರಾಜ್ಯ ಸಭಾ ಸದಸ್ಯ ಅಮರ್ ಸಿಂಗ್ ಜತೆಯಲ್ಲಿ ಜಯಪ್ರದಾ ಅವರನ್ನು ಸಮಾಜವಾದಿ ಪಕ್ಷ ಉಚ್ಛಾಟಿಸಿತ್ತು. 


2014 ಆರ್ಎಲ್ಡಿ ಟಿಕೆಟ್ನಲ್ಲಿ ಬಿಜ್ನೋರ್ನಿಂದ ಸ್ಪರ್ಧಿಸಿದ್ದ ಅವರು ಸೋಲು ಅನುಭವಿಸಿದರು. ಬಿಜೆಪಿ ಅವರ ಐದನೇ ಪಕ್ಷವಾಗಿದೆ ಮತ್ತು ಈ ಬಾರಿ ರಾಂಪುರ ಲೋಕಸಭಾ ಕ್ಷೇತ್ರದಲ್ಲಿ ಅವರು ಅಜಮ್ ಖಾನ್ ವಿರುದ್ಧ ಹೋರಾಡುತ್ತಿದ್ದಾರೆ.