ಜಯಲಲಿತಾ ಅವರು ಆಸ್ಪತ್ರೆಗೆ ಬರುವಾಗಲೇ ಉಸಿರುಗಟ್ಟಿದ ಸ್ಥಿತಿಯಲ್ಲಿದ್ದರು - ಅಪೋಲೋ ಆಸ್ಪತ್ರೆ ಉಪಾಧ್ಯಕ್ಷೆ
``ಜಯಲಲಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ಅವರು ಉಸಿರಾಡುವ ಸ್ಥಿತಿಯಲ್ಲೇ ಇರಲಿಲ್ಲ`` ಎಂದು ಅಪೋಲೋ ಆಸ್ಪತ್ರೆ ಅಧಿಕಾರಿ ಹೇಳಿದ್ದಾರೆ.
ಚೆನ್ನೈ : ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರರು ನಿಧನರಾಗಿ ಒಂದು ವರ್ಷಗಳು ಕಳೆದಿದ್ದರೂ ಇನ್ನೂ ಅವರ ಸಾವು ನಿಗೂಢವಾಗೇ ಇದೆ. ಹೀಗಿರುವಾಗ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಚೆನ್ನೈನ ಅಪೊಲೋ ಆಸ್ಪತ್ರೆಗೆ ಕರೆತಂದಾಗ ಅವರು ಉಸಿರಾಡುವ ಸ್ಥಿತಿಯಲ್ಲೇ ಇರಲಿಲ್ಲ" ಎಂಬ ಆತಂಕಕಾರಿ ಸತ್ಯವೊಂದು ಬಹಿರಂಗಗೊಂಡಿದೆ.
ಈ ಕುರಿತು ಹೇಳಿಕೆ ನೀಡಿರುವ ಅಪೋಲೋ ಆಸ್ಪತ್ರೆ ಉಪಾಧ್ಯಕ್ಷೆ ಪ್ರೀತಾ ರೆಡ್ಡಿ, ''ಜಯಲಲಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ಅವರು ಉಸಿರಾಡುವ ಸ್ಥಿತಿಯಲ್ಲೇ ಇರಲಿಲ್ಲ. ಉಸಿರುಗಟ್ಟಿದ ಸ್ಥಿತಿಯಲ್ಲಿದ್ದರು. ಆದರೆ ಅಗತ್ಯ ಚಿಕಿತ್ಸೆ ನೀಡಿದ ನಂತರ ಅವರು ಚೇತರಿಸಿಕೊಂಡಿದ್ದರು. ಆದರೆ ಕಡೆಗೆ ಏನಾಯಿತು ಎಂಬುದು ನಿಮಗೇ ಗೊತ್ತು'' ಎಂದು ಹೇಳಿದ್ದಾರೆ.
ಜಯಲಲಿತಾ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೆಲವರನ್ನು ಚಿಕಿತ್ಸೆಯ ಸಮಯದಲ್ಲಿ ಅವರ ಹಾಸಿಗೆಯ ಪಕ್ಕ ಇರುವುದಕ್ಕೆ ಅನುಮತಿ ನೀಡಲಾಗಿತ್ತು. ಅವರಿಗೆ ನವದೆಹಲಿ ಹಾಗು ವಿದೇಶದ ಅತ್ಯುತ್ತಮ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿತ್ತು'' ಎಂಬ ವಿಷಯವನ್ನೂ ಅವರು ತಿಳಿಸಿದ್ದಾರೆ.
ಅನಾರೋಗ್ಯದ ಕಾರಣ 2016 ರ ಸೆ.22 ಆಸ್ಪತ್ರೆಗೆ ದಾಖಲಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಡಿ.5 ರಂದು ಕೊನೆಯುಸಿರೆಳೆದಿದ್ದಾರೆಂದು ಘೋಷಿಸಲಾಗಿತ್ತು. ಅವರ 75 ದಿನಗಳ ಆಸ್ಪತ್ರೆ ವಾಸದ ಕುರಿತು ಇದುವರೆಗೂ ನಿಖರವಾದ ಯಾವ ಮಾಹಿತಿಯೂ ಲಭ್ಯವಾಗಿಲ್ಲ. ಅವರ ಸಾವು ಬಗೆದಷ್ಟೂ ನಿಗೂಢತೆಯನ್ನೇ ಸೃಷ್ಟಿಸುತ್ತಿದೆ.