ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ದೆಹಲಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ದಿನಾಂಕಗಳನ್ನು ಪ್ರಕಟಿಸಿದ್ದಾರೆ. 81 ವಿಧಾನಸಭಾ ಕ್ಷೇತ್ರಗಳಿಗೆ ಜಾರ್ಖಂಡ್‌ನಲ್ಲಿ ಒಟ್ಟು ಐದು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 23 ರಂದು ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯುಕ್ತರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಜಾರ್ಖಂಡ್‌ನ 19 ಜಿಲ್ಲೆಗಳು ನಕ್ಸಲ ಪೀಡಿತ ಪ್ರದೇಶಗಳಾಗಿರುವುದರಿಂದ 5 ಹಂತಗಳಲ್ಲಿ ಮತದಾನ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ, ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ನವೆಂಬರ್ 30 ರಂದು ಮೊದಲ ಹಂತಕ್ಕೆ ಮತ ಚಲಾಯಿಸಲಾಗುವುದು. ಮೊದಲ ಹಂತದಲ್ಲಿ 13 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಡಿಸೆಂಬರ್ 7 ರಂದು ಎರಡನೇ ಹಂತ, ಡಿಸೆಂಬರ್ 12 ರಂದು ಮೂರನೇ ಹಂತ, ಡಿಸೆಂಬರ್ 16 ರಂದು ನಾಲ್ಕನೇ ಹಂತ ಮತ್ತು ಡಿಸೆಂಬರ್ 20 ರಂದು ಐದನೇ ಹಂತದ ಮತದಾನ ನಡೆಯಲಿದೆ ಎಂದವರು ತಿಳಿಸಿದರು.


ಇತ್ತೀಚೆಗೆ, ಚುನಾವಣಾ ಆಯೋಗದ ತಂಡವು ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿತು. ಈ ಸಭೆಯಲ್ಲಿ ಚುನಾವಣೆಗಳನ್ನು ಕಡಿಮೆ ಹಂತಗಳಲ್ಲಿ ನಡೆಸುವ ಬೇಡಿಕೆ ಕೇಳಿಬಂದಿತ್ತು. ಬಳಿಕ ಆಯೋಗದ ತಂಡವು ಎಲ್ಲ ಜಿಲ್ಲೆಯ ಎಸ್‌ಪಿ, ಡಿಎಂ ಮತ್ತು ಡಿಜಿಪಿ ಅವರೊಂದಿಗೆ ಸಭೆ ನಡೆಸಿ ಚುನಾವಣೆಯ ಸಿದ್ಧತೆಗಳನ್ನು ಪರಿಶೀಲಿಸಿತು.


ಜಾರ್ಖಂಡ್‌ನಲ್ಲಿ ಒಟ್ಟು 81 ವಿಧಾನಸಭಾ ಸ್ಥಾನಗಳಿವೆ. 2014 ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) 49 ಸ್ಥಾನಗಳನ್ನು ಪಡೆಯಿತು. ರಘುವರ್ ದಾಸ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಅದೇ ಸಮಯದಲ್ಲಿ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) 17 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇದಲ್ಲದೆ, ಬಾಬು ಲಾಲ್ ಮರಂಡಿ ಅವರ ಪಕ್ಷವು ಕೇವಲ ಒಂದು ಸ್ಥಾನವನ್ನು ಗೆದ್ದಿತ್ತು. ಅಲ್ಲದೆ, ಕಾಂಗ್ರೆಸ್ ನೇತೃತ್ವದ ಯುಪಿಎ ಕೇವಲ ಐದು ಸ್ಥಾನಗಳಲ್ಲಿ ಗೆದ್ದಿತ್ತು.