ವಿದ್ಯಾರ್ಥಿಗಳ ಭಾರಿ ಪ್ರತಿಭಟನೆ ನಂತರ ಭಾಗಶಃ ಶುಲ್ಕ ಕಡಿತಕ್ಕೆ ಜೆಎನ್‌ಯು ನಿರ್ಧಾರ
ಇತ್ತೀಚಿಗೆ ದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಪಕ ಹಾಸ್ಟೆಲ್ ಶುಲ್ಕ ಹೆಚ್ಚಳ ನಿರ್ಧಾರವನ್ನು ವಿರೋಧಿಸಿ ನಡೆಸಿದ ಭಾರಿ ಪ್ರತಿಭಟನೆ ನಂತರ ಈಗ ವಿವಿ ಭಾಗಶಃ ಶುಲ್ಕ ಕಡಿತ ಮಾಡುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ನವದೆಹಲಿ: ಇತ್ತೀಚಿಗೆ ದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಪಕ ಹಾಸ್ಟೆಲ್ ಶುಲ್ಕ ಹೆಚ್ಚಳ ನಿರ್ಧಾರವನ್ನು ವಿರೋಧಿಸಿ ನಡೆಸಿದ ಭಾರಿ ಪ್ರತಿಭಟನೆ ನಂತರ ಈಗ ವಿವಿ ಭಾಗಶಃ ಶುಲ್ಕ ಕಡಿತ ಮಾಡುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಈಗ ಈ ಕುರಿತಾಗಿ ಟ್ವೀಟ್ ಮಾಡಿರುವ ಕೇಂದ್ರ ಸರ್ಕಾರದ ಶಿಕ್ಷಣ ಕಾರ್ಯದರ್ಶಿ ಆರ್ ಸುಬ್ರಹ್ಮಣ್ಯ ' ಜೆಎನ್‌ಯು ಕಾರ್ಯಕಾರಿ ಸಮಿತಿಯು ಹಾಸ್ಟೆಲ್ ಶುಲ್ಕ ಮತ್ತು ಇತರ ಷರತ್ತುಗಳಲ್ಲಿ ಪ್ರಮುಖವಾದ ಬದಲಾವಣೆಯನ್ನು ಪ್ರಕಟಿಸುತ್ತದೆ. ಇಡಬ್ಲ್ಯೂಎಸ್ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ಸಹ ಪ್ರಸ್ತಾಪಿಸಿದೆ. ಇದು ವಿದ್ಯಾರ್ಥಿಗಳು ತರಗತಿಗಳಿಗೆ ಹಿಂತಿರುಗುವ ಸಮಯ ಎಂದು ಟ್ವೀಟ್ ಮಾಡಿದ್ದಾರೆ.
ಈಗ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ನಿರ್ಧಾರಿತವಾಗಿರುವಂತೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವು ಭಾಗಶಃ ಹಾಸ್ಟೆಲ್ ಶುಲ್ಕ ಹೆಚ್ಚಳವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ. ಪರಿಷ್ಕೃತ ನಿರ್ಧಾರದ ಪ್ರಕಾರ, ಸಿಂಗಲ್ ಕೊಠಡಿ ಬಾಡಿಗೆ 200 ರೂ. ರಿಂದ 100 ರೂ. ಇರುತ್ತದೆ. ಎಚ್ಚರಿಕೆಯ ಠೇವಣಿ 5,500 ರೂ. ಸೇವಾ ಶುಲ್ಕವನ್ನು 1,700 ರೂ.ಗೆ ನಿಗದಿಪಡಿಸಲಾಗಿದೆ. ಇನ್ನು ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಸಹಾಯಧನದ ನೆರವನ್ನು ವಿವಿ ನೀಡಲಿದೆ.
ಇದಕ್ಕೂ ಮೊದಲು ಶುಲ್ಕವನ್ನು ಸಿಂಗಲ್ ರೂಮಿಗೆ ತಿಂಗಳಿಗೆ 20 ರೂ.ಗಳಿಂದ 600 ರೂ.ಗೆ ಮತ್ತು ಡಬಲ್ ಶೇರಿಂಗ್ ಹಾಸ್ಟೆಲ್ ಗೆ ಪ್ರತಿ ತಿಂಗಳಿಗೆ 10 ರೂ.ಗಳಿಂದ 300 ರೂ.ಗೆ ಏರಿಸಲಾಗಿತ್ತು. ಇದಲ್ಲದೆ, 1,700 ರೂ.ಗಳ ಇತರ ಶುಲ್ಕವನ್ನು ಸಹ ವಿಧಿಸಲಾಗುತ್ತದೆ.
ಜೆಎನ್‌ಯು ವಿದ್ಯಾರ್ಥಿ ಸಂಘ (ಜೆಎನ್‌ಯುಎಸ್‌ಯು) ಸೋಮವಾರದಂದು ವಿವಿ ಆಡಳಿತ ಮಂಡಳಿ ನಿರ್ಧಾರವನ್ನು ಖಂಡಿಸಿ ವ್ಯಾಪಕ ಪ್ರತಿಭಟನೆ ನಡೆಸಿತ್ತು.ಈಗ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು ಕೊನೆಗೂ ಭಾಗಶಃ ಶುಲ್ಕ ಕಡಿತಕ್ಕೆ ಮುಂದಾಗಿದೆ