JNUನಲ್ಲಿ ಮತ್ತೆ ದಾಂಧಲೆ, ಮುಸುಕುಧಾರಿ ವ್ಯಕ್ತಿಗಳಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ಹಲ್ಲೆ
ದೆಹಲಿಯ ಪ್ರತಿಷ್ಠಿತ ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಮತ್ತೊಮ್ಮೆ ದಾಂಧಲೆ ನಡೆದಿದೆ. ವರದಿಗಳ ಪ್ರಕಾರ JNUನ ಎರಡು ವಿದ್ಯಾರ್ಥಿ ಸಂಘಟನೆಗಳ ಮಧ್ಯೆ ಮತ್ತೆ ಹೊಡೆದಾಟ ಸಂಭವಿಸಿದ್ದು, ಇದರಲ್ಲಿ ಒಂದು ವಿದ್ಯಾರ್ಥಿ ಸಂಘಟನೆಗೆ ಸೇರಿದ ಆಯಿಷಿ ಘೋಷ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ನವದೆಹಲಿ: ದೆಹಲಿಯ ಪ್ರತಿಷ್ಠಿತ ಜವಾಹರ ಲಾಲ್ ನೆಹರು ಯುನಿವರ್ಸಿಟಿಯಲ್ಲಿ ಮತ್ತೊಮ್ಮೆ ದಾಂಧಲೆ ನಡೆದಿದೆ. ವರದಿಗಳ ಪ್ರಕಾರ ವಿಶ್ವವಿದ್ಯಾಲಯದ ಆವರಣ ಪ್ರವೇಶಿಸಿರುವ ಕೆಲ ಮುಸುಕುಧಾರಿ ವ್ಯಕ್ತಿಗಳು JNUನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಲ್ಲೆಯಲ್ಲಿ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆಯಾಗಿರುವ ಆಯಿಷಿ ಘೋಷ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿ ಪ್ರಕಾರ ಸುಮಾರು ೫೦ ಗೂಂಡಾಗಳು JNU ಆವರಣಕ್ಕೆ ಪ್ರವೇಶಿಸಿ ವಿದ್ಯಾರ್ಥಿಗಳು ಹಾಗು ಶಿಕ್ಷಕರ ಮೇಲೆ ಹಲ್ಲೆ ನಡೆಸಿ, ಅಲ್ಲಿ ನಿಂತಿದ್ದ ಕಾರುಗಳನ್ನು ಧ್ವಂಸಗೊಳಿಸಿದ್ದಾರೆ ಎನ್ನಲಾಗಿದೆ. ಸದ್ಯ ಈ ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ೫೦ಕ್ಕೂ ಅಧಿಕ ಮುಸುಕುಧಾರಿ ವ್ಯಕ್ತಿಗಳು ವಿವಿ ಆವರಣಕ್ಕೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲ ಅವರು ತಮ್ಮ ಕೈಯಲ್ಲಿ ಹಾಕಿ ಸ್ಟಿಕ್, ರಾಡ್ ಹಾಗೂ ಬ್ಯಾಟ್ ಹಿಡಿದಿರುವುದನ್ನು ಗಮನಿಸಲಾಗಿದೆ.