ಉದ್ಯೋಗಾವಕಾಶಗಳು ಸಾಕಷ್ಟಿವೆ, ಆದರೆ ಉತ್ತರ ಭಾರತೀಯರಲ್ಲಿ ಸಾಮರ್ಥ್ಯದ ಕೊರತೆಯಿದೆ!
ದೇಶದಲ್ಲಿ ಉದ್ಯೋಗಾವಕಾಶಗಳಿಗೆ ಕೊರತೆಯಿಲ್ಲ. ಆದರೆ, ಉತ್ತರ ಭಾರತೀಯರಲ್ಲಿ ಕೌಶಲ್ಯ ಮತ್ತು ಸಾಮರ್ಥ್ಯಗಳ ಕೊರತೆಯಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿ: ದೇಶದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ಆದರೆ ಉತ್ತರ ಭಾರತೀಯರಲ್ಲಿ ಸಾಮರ್ಥ್ಯದ ಕೊರತೆ ಇರುವ ಕಾರಣ ಹಿಂದುಳಿದಿದ್ದಾರೆ ಎಂದು ಹೇಳುವ ಮೂಲಕ ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅಭಿಪ್ರಾಯಪಟ್ಟಿದ್ದಾರೆ.
ಬರೇಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಎರಡನೇ ಅಧಿಕಾರಾವಧಿಯಲ್ಲಿ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ದೇಶದಲ್ಲಿ ಉದ್ಯೋಗಾವಕಾಶಗಳಿಗೆ ಕೊರತೆಯಿಲ್ಲ. ಆದರೆ, ಉತ್ತರ ಭಾರತೀಯರಲ್ಲಿ ಕೌಶಲ್ಯ ಮತ್ತು ಸಾಮರ್ಥ್ಯಗಳ ಕೊರತೆಯಿದೆ ಎಂದು ಸಚಿವರು ಹೇಳಿದರು.
ಕಾರ್ಮಿಕ ಸಚಿವಾಲಯದ ಕಾರ್ಯವೈಖರಿಯನ್ನು ನೋಡಿಕೊಳ್ಳುವುದರಿಂದ, ಪರಿಸ್ಥಿತಿಯ ಬಗ್ಗೆ ಮಾಹಿತಿ ಇದೆ ಎಂದ ಗಂಗ್ವಾರ್, "ಆರ್ಥಿಕ ಮಂದಗತಿಯ ಸುತ್ತಲಿನ ಕಾಳಜಿಯನ್ನು ನಾವು ಅರ್ಥಮಾಡಿಕೊಂಡಿದ್ದರೂ, ದೇಶದಲ್ಲಿ ಉದ್ಯೋಗಾವಕಾಶಕ್ಕೇನೂ ಕೊರತೆಯಿಲ್ಲ" ಎಂದು ಹೇಳಿದರು.
ಇದೇ ವೇಳೆ, ಸಮಾಜವಾದಿ ಪಕ್ಷದ ಮುಖಂಡರಾದ ಅಖಿಲೇಶ್ ಯಾದವ್, ಅಜಮ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ ಸಂತೋಷ್ ಗಂಗ್ವಾರ್, ರಾಂಪುರದ ಜನರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಲು ಅಜಮ್ ಖಾನ್ ಅವರಂತಹ ನಾಯಕನನ್ನು ಆಯ್ಕೆ ಮಾಡಿರುವುದು ನಿಜಕ್ಕೂ ದುರದೃಷ್ಟಕರ ಎಂದು ಹೇಳಿದರು.