ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದು ಆತ್ಮಹತ್ಯೆಗೆ ಸಮಾನ: ಪ್ರಧಾನಿ ಮೋದಿ
ಕಾಂಗ್ರೆಸ್ ಪಕ್ಷಕ್ಕೆ ಜನರ ಬೇಡಿಕೆಗಳ ಬಗ್ಗೆ ಯಾವುದೇ ಸೂಕ್ಷ್ಮ ಕಾಳಜಿ ಇಲ್ಲ. ಬದಲಾಗಿ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುವ ಕಡೆ ಹೆಚ್ಚು ಗಮನ ಹರಿಸುತ್ತದೆ ಎಂದು ಪ್ರಧಾನಿ ಮೋದಿ ಟೀಕಿಸಿದರು.
ನವದೆಹಲಿ: ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದು ಆತ್ಮಹತ್ಯೆಗೆ ಸಮಾನ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಹೇಳಿಕೆಯನ್ನು ಪುನರುಚ್ಛರಿಸಿದರು.
ಲೋಕಸಭೆಯಲ್ಲಿಂದು ರಾಷ್ಟ್ರಪತಿ ಭಾಷಣದ ಬಳಿಕ ವಂದನಾ ನಿರ್ಣಯದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷ ಮೋದಿಯನ್ನು ದ್ವೇಷಿಸುವಂತೆ, ವಿರೋಧ ಪಕ್ಷ ಇಡೀ ದೇಶವನ್ನೇ ದ್ವೇಷಿಸಲು ಪ್ರಾರಂಭಿಸಿದೆ. ಲಂಡನ್ ನಲ್ಲಿ ಪತ್ರಿಕಾಗೋಷ್ಟಿಯನ್ನು ಆಯೋಜಿಸುವ ಮೂಲಕ ಭಾರತವನ್ನು ಕೆಲ ಮಟ್ಟದಲ್ಲಿ ಬಿಂಬಿಸಲು ಕಾಂಗ್ರೆಸ್ ಪ್ರಯತ್ನಿಸಿದೆ ಎಂದು ಮೋದಿ ಆರೋಪಿಸಿದರು.
ಮುಂದುವರೆದು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಜನರ ಬೇಡಿಕೆಗಳ ಬಗ್ಗೆ ಯಾವುದೇ ಸೂಕ್ಷ್ಮ ಕಾಳಜಿ ಇಲ್ಲ. ಬದಲಾಗಿ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುವ ಕಡೆ ಹೆಚ್ಚು ಗಮನ ಹರಿಸುತ್ತದೆ. ಪ್ರತಿ ಬಾರ್ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೂ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ಹಾಗಾಗಿ ಬೆಲೆ ಏರಿಕೆ ಮತ್ತು ಕಾಂಗ್ರೆಸ್ ಎರಡೂ ಒಂದೇ ಎಂದು ಟೀಕಿಸಿದರು. ಅಷ್ಟೇ ಅಲ್ಲದೆ, ಕಾಂಗ್ರೆಸ್ ಕುಟುಂಬ ರಾಜಕಾರಣದ ಬಗ್ಗೆ ಮೋದಿ ಕಟುವಾಗಿ ಟೀಕಿಸಿದರು.
ರಫೇಲ್ ಯುದ್ಧ ವಿಮಾನ ಖರೀದಿ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ದೇಶದ ವಾಯು ಸೇನೆಯನ್ನು ದುರ್ಬಳಗೊಳಿಸಲು ಕಾಂಗ್ರೆಸ್ ಪ್ರಯತ್ನಿಸಿದೆ. ಸರ್ಜಿಕಲ್ ಸ್ಟ್ರೈಕ್ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆಗೂ ಅಪಮಾನ ಮಾಡಿದೆ ಎಂದು ಕಿಡಿಕಾರಿದರು.
ದೇಶದಲ್ಲಿ ಉನ್ನತ ಸಂಸ್ಥೆಗಳನ್ನು ಬಿಜೆಪಿ ನಾಶಪಡಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದು ಕಾಂಗ್ರೆಸ್ ಸರ್ಕಾರವೇ ಹೊರತು ಬಿಜೆಪಿ ಅಲ್ಲ. ನೀವು ದೇಶವನ್ನು ಲೂಟಿ ಮಾಡಲು ಅವಕಾಶ ನೀಡಿದಿರಿ. ಆದರೆ ನಾವು ಅದನ್ನು ವಾಪಸ್ ತರಲು ಯತ್ನಿಸಿದ್ದೇವೆ ಎಂದು ಪ್ರಧಾನಿ ಕಾಂಗ್ರೆಸ್ ಗೆ ತಿರುಗೇಟು ನೀಡಿದರು.
ಸಂಸತ್ತಿನ ಕೊನೆಯ ಭಾಷಣದಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ, ಬಿಸಿ ಅಂದರೆ ಬಿಫೋರ್ ಕಾಂಗ್ರೆಸ್ (ಹಿಂದಿನ ಕಾಂಗ್ರೆಸ್) ಎಸಿ ಅಂದರೆ ಆಫ್ಟರ್ ಡೈನೆಸ್ಟಿ ಎಂದ ಮೋದಿ, ನಿರಾಶೆಯಲ್ಲಿದ್ದವರು ಈಗಲೂ ನಿರಾಶೆಯಲ್ಲಿದ್ದಾರೆ. ಆಶಾವಾದ ಇಟ್ಟುಕೊಂಡವರಿಗೆ ಆಶ್ವಾಸನೆಗಳು ಬೇಕಿಲ್ಲ ಎಂದರು.