ಪಂಪಾ: "ಮಹಿಳೆಯರು 18 ಮೆಟ್ಟಿಲು ಏರಿ ದೇಗುಲ ಪ್ರವೇಶಿಸಿದರೆ ಎಲ್ಲಾ ಪೂಜಾ ಕಾರ್ಯಗಳನ್ನು ನಿಲ್ಲಿಸಿ ಗರ್ಭಗುಡಿ ಬಾಗಿಲು ಮುಚ್ಚಿ ಮನೆಗೆ ಹೋಗುತ್ತೇನೆ. ನಾನು ಭಕ್ತರೊಂದಿಗಿದ್ದೇನೆ. ಭಕ್ತರ ಭಾವನೆಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಹೀಗಾಗಿ ನಾನು ಭಕ್ತರನ್ನು ಬೆಂಬಲಿಸುತ್ತೇನೆ" ಎಂದು ಪ್ರಧಾನ ಅರ್ಚಕ​ಕಂಡರಾರು ರಾಜೀವನ್​ ಎಚ್ಚರಿಕೆ ನೀಡಿದ ಬಳಿಕ ಪತ್ರಕರ್ತೆ ಕವಿತಾ ಜಕ್ಕಲ ಹಾಗೂ ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ಅಯ್ಯಪ್ಪನ ದೇಗುಲ ಪ್ರವೇಶಿಸದೆ ಹಿಂದಿರುಗಿದ್ದಾರೆ.



COMMERCIAL BREAK
SCROLL TO CONTINUE READING

250 ಪೊಲೀಸರು, ಕಮಾಂಡೋಗಳ ರಕ್ಷಣೆಯಲ್ಲಿ ಇಬ್ಬರು ಮಹಿಳೆಯರು ಪೊಲೀಸರಂತೆ ಹೆಲ್ಮೆಟ್ ಹಾಗೂ ಸಮವಸ್ತ್ರ ಧರಿಸಿ ಭಾರೀ ಭದ್ರತೆಯ ಮೂಲಕ ದೇವಾಲಯದತ್ತ ತೆರಳಿದ್ದರು. ಮಹಿಳೆಯರು ಪಂಪಾ ದಾಟುತ್ತಿದ್ದಂತೆಯೇ ಪ್ರತಿಭಟನೆ ತೀವ್ರಗೊಂಡಿದ್ದು, ಸ್ವತಃ ಅಯ್ಯಪ್ಪ ಸ್ವಾಮಿ ದೇಗುಲದ ಪ್ರಧಾನ ಅರ್ಚಕರು ಮಹಿಳೆಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದೇ ಸಂದರ್ಭದಲ್ಲಿ ಮಹಿಳೆಯರು ದೇಗುಲ ಪ್ರವೇಶ ಮಾಡಿದ್ದೇ ಆದರೆ ತಾವು ದೇಗುಲದ ದ್ವಾರವನ್ನು ಮುಚ್ಚಿಬಿಡುತ್ತೇವೆ ಎಂದು ಬೆದರಿಕೆ ಹಾಕಿದರು.


ಈ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು ಪಥನಂತಿಟ್ಟ ಕಚೇರಿಯಲ್ಲಿ ಸಂಧಾನ ಸಭೆ ಆಯೋಜಿಸಿದರು. ಸ್ವಾಮಿ ದರ್ಶನಕ್ಕೆಂದು ತೆರಳಿದ್ದ ಇಬ್ಬರು ಮಹಿಳೆಯರನ್ನೂ ಕಚೇರಿಗೆ ಕರೆಸಿಕೊಂಡ ಅಧಿಕಾರಿಗಳು ಈ ಗಂಭೀರ ಪರಿಸ್ಥಿತಿಯಲ್ಲಿ ದೇವರ ದರ್ಶನ ಕೈಗೊಳ್ಳದಿರುವುದು ಒಳಿತು ಎಂದು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಬಳಿಕ ಮಾಧ್ಯಮದವರಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ ಕೇರಳ ಐಜಿ ಎಸ್​.ಶ್ರೀಜಿತ್, ಶಬರಿಮಲೆ ದೇಗುಲದ ತಂತ್ರಿಗಳು ನನ್ನ ಜೊತೆ ಚರ್ಚಿಸಿದ್ದಾರೆ. ಮಹಿಳೆಯರು ಪ್ರವೇಶಿಸಿದರೆ ಆಚಾರ ಉಲ್ಲಂಘನೆಯಾಗುತ್ತೆ. ದೇವರ ದರ್ಶನಕ್ಕೆ ಅವಕಾಶ ಕೊಡಲ್ಲ ಎಂದು ತಂತ್ರಿ ಹೇಳಿದ್ದರು. ಹೀಗಾಗಿ ಇಬ್ಬರು ಮಹಿಳೆಯರೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ. ಇಬ್ಬರೂ ಮಹಿಳೆಯರು ಹಿಂದಿರುಗಲು ಒಪ್ಪಿಗೆ ನೀಡಿದ್ದು, ಅವರನ್ನು ವಾಪಸ್​ ಕರೆದೊಯ್ಯಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.



ಇನ್ನು ಈ ಬಗ್ಗೆ ಮಾತನಾಡಿರುವ ಮಹಿಳೆ ನಮಗೆ ಭದ್ರತೆ ನೀಡಿ ದೇವಾಲಯ ಪ್ರವೇಶಿಸಲು ಕೈಗೊಂಡ ಕ್ರಮಗಳನ್ನು ನೋಡಿ ಬಹಳ ಸಂತಸವಾಗಿದೆ. ಆದರೆ ನಾವು ದೇಗುಲಕ್ಕೆ ಮರಳಿ ಬರುತ್ತೇವೆ ಎಂದು ದೇಗುಲದವರೆಗೆ ಹೋಗಿ ಮರಳಿದ ಮಹಿಳಾ ಪತ್ರಕರ್ತೆ ಕವಿತಾ ಪ್ರತಿಕ್ರಿಯಿಸಿದ್ದಾರೆ.