ನವದೆಹಲಿ: ಭಾರತದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನು ನೇಮಕ ಮಾಡುವಂತೆ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಕೇಂದ್ರ ಸರ್ಕಾರಕ್ಕೆ ಅಧಿಕೃತವಾಗಿ ಶಿಫಾರಸ್ಸು ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಅಕ್ಟೋಬರ್ 2ಕ್ಕೆ ಹಾಲಿ ಸಿಐಜೆ ದೀಪಕ್ ಮಿಶ್ರಾ ಅವರು ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ನ್ಯಾಯಾಧೀಶ ರಂಜನ್ ಗೊಗೋಯ್ ಅವರ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ಈ ಬಗ್ಗೆ ಇಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ಸಿಜೆಐ ದೀಪಕ್ ಮಿಶ್ರಾ,  ಭಾರತದ ಮುಖ್ಯ ನ್ಯಾಯಮೂರ್ತಿಗಳ ಆಯ್ಕೆಯನ್ನು ಸೇವಾ ಹಿರಿತನದ ಆಧಾರದ ಮೇಲೆ ನಡೆಯಬೇಕು. ಹೀಗಾಗಿ ಸೇವಾ ಹಿರಿತನದಲ್ಲಿ ಹಿರಿಯರಾಗಿರುವ ರಂಜನ್ ಗೊಗೊಯ್ ಅವರನ್ನು ಮುಂದಿನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಸೂಚಿಸುತ್ತಿದ್ದೇನೆ ಎಂದು ದೀಪಕ್ ಮಿಶ್ರಾ ತಮ್ಮ ಪತ್ರದಲ್ಲಿ ಬರೆದಿದ್ದಾರೆ.


ವಾಸ್ತವವಾಗಿ, ನ್ಯಾಯಮೂರ್ತಿ ಮಿಶ್ರಾ ಅವರ ಸಿಜೆಐ ಅಧಿಕಾರಾವಧಿ ಅಕ್ಟೋಬರ್ 2 ರಂದು ಪೂರ್ಣಗೊಳ್ಳಲಿದೆ. ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಇತ್ತೀಚೆಗೆ ನ್ಯಾಯಮೂರ್ತಿ ಮಿಶ್ರಾ ಅವರನ್ನು ಉತ್ತರಾಧಿಕಾರಿ ಶಿಫಾರಸು ಮಾಡುವಂತೆ ಕೇಳಿಕೊಂಡಿದ್ದರು.


ಜಸ್ಟಿಸ್ ಗೊಗೊಯ್ ಸೇರಿದಂತೆ ನಾಲ್ವರು ಹಿರಿಯ ನ್ಯಾಯಮೂರ್ತಿಗಳಾದ  ಚಲಮೇಶ್ವರ್, ಎಂ.ಬಿ. ಲೋಕರ್ ಮತ್ತು ಕುರಿಯನ್‌ ಜೋಸೆಫ್ ಬಂಡೆದ್ದಿದ್ದರು‌. ಈ ವರ್ಷ ಜನವರಿಯಲ್ಲಿ ಅಭೂತಪೂರ್ವ ರೀತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಕೇಸುಗಳ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆಂದು ಆಪಾದಿಸಿದ್ದರು. ಈ ಘಟನೆಯನ್ನು ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ಮೊದಲ ಭಾರಿಗೆ ನ್ಯಾಯಮೂರ್ತಿಗಳ ನಡುವಣ ಜಗಳ ಬೀದಿಗೆ ಬಂದಿದೆ ಎಂದು ಹೇಳಲಾಗುತ್ತಿತ್ತು.