ಹಿಂದಿ ಭಾಷೆ ಹೇರಿಕೆ ; ನಟ ಸೂರ್ಯ ಬೆಂಬಲಿಸಿದ ಕಮಲ್ ಹಾಸನ್
ಹಿಂದಿ ಭಾಷಾ ಹೇರಿಕೆ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಮಕ್ಕಳ್ ನೀದಿ ಮೈಯ್ಯಂ ಸಂಸ್ಥಾಪಕ ಹಾಗೂ ನಟ ಕಮಲ್ ಹಾಸನ್ ಕಿಡಿ ಕಾರಿದ್ದಾರೆ.
ನವದೆಹಲಿ: ಹಿಂದಿ ಭಾಷಾ ಹೇರಿಕೆ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಮಕ್ಕಳ್ ನೀದಿ ಮೈಯ್ಯಂ ಸಂಸ್ಥಾಪಕ ಹಾಗೂ ನಟ ಕಮಲ್ ಹಾಸನ್ ಕಿಡಿ ಕಾರಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಕಾಯ್ದೆ 2019 ರ ವಿಚಾರವಾಗಿ ಎಐಡಿಎಂಕೆ ಹಾಗೂ ಬಿಜೆಪಿ ವಿರುದ್ಧ ಕಿಡಿ ಕಾರಿದ್ದ ನಟ ಸೂರ್ಯ ಶಿವಕುಮಾರ್ ಗೆ ಈಗ ಕಮಲ್ ಹಾಸನ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಚೆನ್ನೈನಲ್ಲಿ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸೂರ್ಯ ಶಿವಕುಮಾರ್ 'ಈ ಕಾಯ್ದೆಯು ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿಯನ್ನು ಕಡ್ಡಾಯವಾಗಿ ಮೂರನೇ ಭಾಷೆಯಾಗಿ ಕಲಿಸುವ ಮೂಲಕ ಹಿಂದಿ ಹೇರಿಕೆ ಮಾಡಲು ಹೊರಟಿದೆ ಎಂದು ನೂತನ ಕಾಯ್ದೆ ವಿರುದ್ಧ ದೂರಿದ್ದರು.
ಇನ್ನು ಮುಂದುವರೆದು ಈ ನೀತಿಯೂ ಪ್ರಮುಖವಾಗಿ ಪ್ರವೇಶ ಪರೀಕ್ಷೆ ಹೆಚ್ಚಿನ ಒತ್ತನ್ನು ನೀಡುವುದರ ಮೂಲಕ ಗುಣಮಟ್ಟದ ಶಿಕ್ಷಣ ಕಲಿಕೆಯನ್ನು ನೀಡಲು ವಿಫಲವಾಗುತ್ತಿದೆ ಎಂದು ಅವರು ದೂರಿದರು. 'ವಿದ್ಯಾರ್ಥಿಗಳು ಕ್ಲಾಸ್ ಗಳಿಗೆ ಹಾಜರಾಗಲು ಹೇಗೆ ಸಾಧ್ಯ ? ನನ್ನ ಮಕ್ಕಳಿಗೆ ಮೂರನೆ ಭಾಷೆಯನ್ನೂ ಕಲಿಸಲು ಕಷ್ಟವಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
ಈಗ ಇದಕ್ಕೆ ಟ್ವೀಟ್ ಮಾಡಿ ಬೆಂಬಲ ವ್ಯಕ್ತಪಡಿಸಿರುವ ಕಮಲ್ ಹಾಸನ್ " ಸೂರ್ಯ ಎತ್ತಿರುವ ಅನೇಕ ವಿಷಯಗಳನ್ನು ನಾನು ಒಪ್ಪುತ್ತೇನೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರಂಕುಶ ನೀತಿಯನ್ನು ನಾನು ಖಂಡಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಕಮಲ್ ಹಾಸನ್ ಈ ಹಿಂದೆಯೇ ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧವಾಗಿ ಧ್ವನಿ ಎತ್ತಿದ್ದರು. ಈ ಹಿಂದೆ ಅವರು ' ನಾನು ಹಿಂದಿ ಚಲನ ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ಯಾರು ಕೂಡ ಯಾರ ಮೇಲೆ ಒತ್ತಡವನ್ನು ಹೇರಬಾರದು. ಭಾಷೆಯನ್ನು ಕಲಿಯುವುದು ವೈಯಕ್ತಿಕ ವಿಚಾರ 'ಎಂದು ಕಮಲ್ ಹಾಸನ್ ಹೇಳಿದ್ದರು.