ಅಸದುದ್ದೀನ್ ಒವೈಸಿಗೆ ಹನುಮಾನ ಚಾಲಿಸಾ ಪಠಿಸಲು ಸಲಹೆ ನೀಡಿದ ಬಿಜೆಪಿ ಮುಖಂಡ
ಈ ಕುರಿತು ಟ್ವೀಟ್ ಮಾಡಿರುವ ಕಪಿಲ್ ಮಿಶ್ರಾ, `ಕೇಜ್ರಿವಾಲ್ ಈಗಾಗಲೇ ಹನುಮಾನ ಚಾಲೀಸಾ ಪಠಿಸಲು ಆರಂಭಿಸಿದ್ದು, ಇನ್ಮುಂದೆ ಒವೈಸಿ ಕೂಡ ಹನುಮಾನ ಚಾಲೀಸಾ ಪಠಿಸಲಿದ್ದಾರೆ.
ನವದೆಹಲಿ: ಯಾವಾಗಲು ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ವಿವಾದ ಸೃಷ್ಟಿಸುವ BJP ಮುಖಂಡ ಕಪಿಲ್ ಮಿಶ್ರಾ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯ ಮಾಡೆಲ್ ಟೌನ್ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿರುವ ಕಪಿಲ್ ಮಿಶ್ರಾ, ಕೇಜ್ರಿವಾಲ್ ಅವರನ್ನು ಗುರಿಯಾಗಿಸಿದ್ದು, "ಕೇಜ್ರಿವಾಲ್ ಇದೀಗ ಹನುಮಾನ ಚಾಲೀಸಾ ಪಠಿಸಲು ಆರಂಭಿಸಿದ್ದು, ಇದೀಗ ಅಸದುದ್ದೀನ್ ಒವೈಸಿ ಕೂಡ ಹನುಮಾನ್ ಚಾಲೀಸಾ ಪಠಿಸಲಿದ್ದಾರೆ" ಎಂದಿದ್ದಾರೆ.
ಈ ಕುರಿತು ಮಂಗಳವಾರ ಟ್ವೀಟ್ ಮಾಡಿರುವ ಕಪಿಲ್ ಮಿಶ್ರಾ, "ಕೇಜ್ರಿವಾಲ್ ಇದೀಗ ಹನುಮಾನ ಚಾಲೀಸಾ ಪಠಿಸಲು ಆರಂಭಿಸಿದ್ದು, ಇದೀಗ ಅಸದುದ್ದೀನ್ ಒವೈಸಿ ಕೂಡ ಹನುಮಾನ್ ಚಾಲೀಸಾ ಪಠಿಸಲಿದ್ದಾರೆ. ಇದು ನಮ್ಮ ಒಗ್ಗಟ್ಟಿನ ಶಕ್ತಿಯಾಗಿದೆ. ಹೀಗೆಯೇ ಒಗ್ಗಟ್ಟಾಗಿ ಮುಂದುವರೆಯೋಣ, ಒಗ್ಗಟ್ಟು ಪ್ರದರ್ಶಿಸೋಣ. ನಾವೆಲ್ಲರೂ ಒಂದಾಗಿ ವೋಟ್ ಮಾಡೋಣ. ನಮ್ಮೆಲ್ಲರ ಒಗ್ಗಟ್ಟಿನಿಂದ 'ಶೇ.20ರ ವೋಟ್ ಬ್ಯಾಂಕ್'ನ ಕೊಳಕು ರಾಜಕೀಯ ಮಾಡುವವರ ಗೋರಿ ಅಗಿಯೋಣ" ಎಂದು ಹೇಳಿದ್ದಾರೆ.
ದೆಹಲಿ ಚುನಾವಣೆಗಳಿಗೆ ದಿನಾಂಕ ನಿಗದಿಯಾದಾಗಿನಿಂದ ಕಪಿಲ್ ಮಿಶ್ರಾ ದೆಹಲಿ ಸಿಎಂ ಅರವಿಂದ ಕೆಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಲೆ ಇದ್ದಾರೆ. ಇದಕ್ಕೂ ಮೊದಲು ಹೇಳಿಕೆ ನೀಡಿದ್ದ ಅವರು, 'AAP' ಪಕ್ಷ ತನ್ನ ಹೆಸರನ್ನು ಮುಸ್ಲಿಂ ಲೀಗ್ ಆಗಿ ಬದಲಾಯಿಸಿಕೊಳ್ಳಬೇಕು. ಸಿಎಂ ಕೆಜ್ರಿವಾಲ್ ಜಿನ್ನಾ ಮಾದರಿಯ ರಾಜಕೀಯ ನಡೆಸುತ್ತಿದ್ದಾರೆ. ಶೇ.20ರಷ್ಟಿರುವ ಮುಸ್ಲಿಂಮರ ವೋಟ್ ಪಡೆಯಲು ಉಗ್ರರು ಹಾಗೂ ದೇಶದ್ರೋಹಿಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
"ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಮ್ಮ ರಾಜ್ಯದಲ್ಲಿ ದೇಶದ್ರೋಹಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ. ಸಿಎಂ ಯೋಗಿ ಹೇಳುತ್ತಿರುವುದು ಜನರ ಮನಸ್ಸಿನ ಮಾತುಗಳಾಗಿದ್ದು, ಕೆಜ್ರಿವಾಲ್ ಜಿನ್ನಾ ಅವರ ರಾಜಕೀಯ ನಡೆಸುತ್ತಿದ್ದಾರೆ. ಉಮರ್ ಖಾಲಿದ್, ಅಫ್ಜಲ್ ಗುರು, ಬುರಹಾನ್ ವಾನಿ ಹಾಗೂ ಉಗ್ರವಾದಿಗಳನ್ನು ತಮ್ಮ ರಕ್ಷಕರು ಎಂದು ಹೇಳಿಕೊಳ್ಳುವವರು ಇಂದು ಯೋಗಿ ಆದಿತ್ಯನಾಥ್ ಹೆಸರು ಕೇಳಿ ಭಯಪಡುತ್ತಿದ್ದಾರೆ" ಎಂದು ಕಪಿಲ್ ಮಿಶ್ರಾ ಹೇಳಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಗಳಲ್ಲಿ ಮಾಡೆಲ್ ಟೌನ್ ವಿಧಾನಸಭಾ ಕ್ಷೇತ್ರದಿಂದ ಕಪಿಲ್ ಮಿಶ್ರಾ ಚುನಾವಣಾ ಕಣಕ್ಕಿಳಿಯುತ್ತಿದ್ದಂತೆ ಇದೀಗ ಈ ಕ್ಷೇತ್ರ ಹೈಪ್ರೋಪ್ಫೈಲ್ ಕ್ಷೇತ್ರಗಳಲ್ಲಿ ಒಂದಾಗಿದೆ. ಇದಕ್ಕೂ ಮೊದಲು ದೆಹಲಿಯ ಕರಾವಲ್ ನಗರ್ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗಳನ್ನು ಗೆದ್ದಿದ್ದ ಕಪಿಲ್ ಮಿಶ್ರಾ, ಆಮ್ ಆದ್ಮಿ ಪಕ್ಷದ ಸರ್ಕಾರದಲ್ಲಿ ಮಂತ್ರಿ ಕೂಡ ಆಗಿದ್ದರು. ಈ ಬಾರಿ ಮಾಡೆಲ್ ಟೌನ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಆಕಾಂಕ್ಷಾ ಒಲಾ ಅವರನ್ನು ಕಣಕ್ಕಿಳಿಸಿದೆ. ಈ ಕ್ಷೇತ್ರದಿಂದ ಹಾಲಿ ಶಾಸಕರಾತಿರುವ ಅಖಿಲೇಶ್ ತ್ರಿಪಾಠಿ ಅವರಿಗೆ AAP ಟಿಕೆಟ್ ನೀಡಿದೆ.