ಪ್ರಧಾನಿ ಮೋದಿ ಫಿಟ್ನೆಸ್ ಚಾಲೆಂಜ್‍ಗೆ ಹೆಚ್ಡಿಕೆ ಹೇಳಿದ್ದೇನು ಗೊತ್ತೇ?
ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ನೆಸ್ ಚಾಲೆಂಜ್‍ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ನೆಸ್ ಚಾಲೆಂಜ್‍ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದು, ವೈಯಕ್ತಿಕ ಆರೋಗ್ಯದೊಂದಿಗೆ ರಾಜ್ಯದ ಅಭಿವೃದ್ಧಿ ಬಗ್ಗೆಯೂ ಸವಾಲು ಸ್ವೀಕರಿಸುವುದಾಗಿ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ ಚಾಲೆಂಜ್'ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, "ನನ್ನ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ನಿಮಗೆ ಧನ್ಯವಾದಗಳು. ದೈಹಿಕ ಆರೋಗ್ಯವು ಎಲ್ಲಾ ಚಟುವಟಿಕೆಗಳಿಗೂ ಮುಖ್ಯವಾಗುತ್ತದೆ. ಇದು ಆರೋಗ್ಯಕ್ಕೂ ಒಳ್ಳೆಯದು. ನನ್ನ ದಿನನಿತ್ಯದ ಜೀವನದಲ್ಲಿ ನಾನು ಯೋಗ ಹಾಗೂ ಟ್ರೇಡ್‍ಮಿಲ್ ಮಾಡುತ್ತೇನೆ” ಎಂದು ಹೇಳುವುದರೊಂದಿಗೆ "ಕೇವಲ ನನ್ನ ಆರೋಗ್ಯದ ಬಗ್ಗೆ ಅಷ್ಟೇ ಅಲ್ಲ, ರಾಜ್ಯದ ಫಿಟ್ನೆಸ್ ಬಗ್ಗೆಯೂ ಹೆಚ್ಚು ಗಮನ ನೀಡುತ್ತೇನೆ. ರಾಜ್ಯದ ಅಭಿವೃದ್ಧಿಯ ವಿಷಯದಲ್ಲಿ ನಾನು ನಿಮ್ಮಿಂದ ಸಹಾಯ ನಿರೀಕ್ಷಿಸುತ್ತೇನೆ" ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಫಿಟ್ನೆಸ್ ವೀಡಿಯೋವನ್ನು ಟ್ವಿಟ್ಟರ್'ನಲ್ಲಿ ಅಪ್ಲೋಡ್ ಮಾಡಿ "ಇದು ನನ್ನ ಬೆಳಗ್ಗಿನ ವ್ಯಾಯಾಮ. ಯೋಗ ಹೊರತಾಗಿ ಪಂಚಭೂತಗಳಾದ ಪೃಥ್ವಿ, ಜಲ, ಅಗ್ನಿ, ವಾಯು ಹಾಗೂ ಆಕಾಶದಿಂದ ಪ್ರೇರಣೆಗೊಂಡು ಸರಿಯಾದ ದಾರಿಯಲ್ಲಿ ನಡೆಯುತ್ತೇನೆ. ಇದರ ಜೊತೆ ಪ್ರಾಣಾಯಾಮ ಮಾಡುತ್ತೇನೆ. #HumFitTohIndiaFit” ಎಂದು ಟ್ವೀಟ್ ಮಾಡಿದ್ದರು. ಅಲ್ಲದೆ, ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಭಾರತದ ಅಂತರಾಷ್ಟ್ರೀಯ ಟೇಬಲ್ ಟೆನ್ನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಅವರಿಗೆ ಈ ಚಾಲೆಂಜ್ ನೀಡಿದ್ದರು.